ಶಿಕ್ಷಕಿ ಹಿಂದೆ ಬಿದ್ದ 60ರ ವೃದ್ಧ – ಒಪ್ಪದಿದ್ದಕ್ಕೆ ಕೊಲೆಗೈದು, ತಾನೂ ಶೂಟ್ ಮಾಡಿಕೊಂಡು ಮೃತ

ಶಿಕ್ಷಕಿ ಹಿಂದೆ ಬಿದ್ದ 60ರ ವೃದ್ಧ – ಒಪ್ಪದಿದ್ದಕ್ಕೆ ಕೊಲೆಗೈದು, ತಾನೂ ಶೂಟ್ ಮಾಡಿಕೊಂಡು ಮೃತ

ಮಡಿಕೇರಿ: ಹೈಸ್ಕೂಲ್ ಶಿಕ್ಷಕಿ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳಲೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬಾಳೆಲೆ ಗ್ರಾಮದ ಶಿಕ್ಷಕಿ ಆಶಾ ಕಾವೇರಮ್ಮ(50) ಎಂದು ಗುರುತಿಸಲಾಗಿದೆ

ಮೃತ ಶಿಕ್ಷಕಿ ಶುಕ್ರವಾರ ಬೆಳಗ್ಗೆ 8.15ರ ಸುಮಾರಿಗೆ ಶಾಲಾ ವಾಹನಕ್ಕಾಗಿ ಬಾಳೆಲೆ ಪೊಲೀಸ್ ಉಪಠಾಣೆ ಎದುರು ಕಾಯುತ್ತಿದ್ದರು. ಈ ವೇಳೆ ಶಿಕ್ಷಕಿಯ ಮೇಲೆ ಪೊನ್ನಂಪೇಟೆ ನಿವಾಸಿ ಜಗದೀಶ್ ಐದು ಬಾರಿ ಗುಂಡು ಹಾರಿಸಿದ್ದಾನೆ. ಪರಿಣಾಮ ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಕೂಡ ಕಾಫಿ ತೋಟದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗುಂಡಿಕ್ಕಿದಾತ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಆಶಾ ಅವರು ಗೋಣಿಕೊಪ್ಪಲು ಲಯನ್ಸ್ ಹೈಸ್ಕೂಲ್ ಶಾಲೆಯ ಶಿಕ್ಷಕಿಯಾಗಿದ್ದರು. ಶಿಕ್ಷಕಿ ಮೇಲೆ ಜಗದೀಶ್ ಕಣ್ಣು ಹಾಕಿದ್ದನು. ಪತಿ ಇಲ್ಲದ ಆಶಾಗೆ ಪತ್ನಿ ಇಲ್ಲದ ಜಗದೀಶ್ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಎರಡು ವರ್ಷಗಳಿಂದ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು.

ಅಷ್ಟೇ ಅಲ್ಲದೆ ಎರಡು ವರ್ಷದ ಹಿಂದಷ್ಟೇ ಅತ್ಯಾಚಾರ ಯತ್ನದ ಬಗ್ಗೆ ಜಗದೀಶ್ ವಿರುದ್ಧ ಶಿಕ್ಷಕಿ ಆಶಾ ದೂರು ನೀಡಿದ್ದರು. ಜೈಲಿನಲ್ಲಿದ್ದ ಜಗದೀಶ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದನು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಮತ್ತೆ ಶಿಕ್ಷಕಿಯ ಹಿಂದೆ ಬಿದ್ದಿದ್ದನು. ಇದನ್ನು ತಿರಸ್ಕರಿಸಿದ್ದಕ್ಕೆ ಇಂದು ಮುಂಜಾನೆ ಟೀಚರ್ ಮೇಲೆ ಗುಂಡಿನ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿದ್ದಾನೆ.

ಈ ಕುರಿತು ಪೋನ್ನಂಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.