ಶಿರ್ವ ಮಹಿಳಾ ಮಂಡಲ: ಕಾರ್ಗಿಲ್ ವಿಜಯೋತ್ಸವ ಹಾಗೂ ಆಟಿದ ಕೂಟ ಕಾರ್ಯಕ್ರಮ

Spread the love

ಶಿರ್ವ ಮಹಿಳಾ ಮಂಡಲ: ಕಾರ್ಗಿಲ್ ವಿಜಯೋತ್ಸವ ಹಾಗೂ ಆಟಿದ ಕೂಟ ಕಾರ್ಯಕ್ರಮ

ಉಡುಪಿ: ಇಂದು ಪ್ರತೀಯೊಬ್ಬರೂ ತಮ್ಮ ಮಕ್ಕಳು ಇಂಜಿನಿಯರ್ ಅಥವಾ ವೈದ್ಯರೇ ಆಗಬೇಕು ಎಂಬ ನಿರೀಕ್ಷೆ , ಆಕಾಂಕ್ಷೆಗಳನ್ನು ಇಟ್ಟು ಕೊಳ್ಳುತ್ತಾರೆಯೇ ಹೊರತು ತಮ್ಮ ಮಗ/ಮಗಳು ಸೈನ್ಯಕ್ಕೆ ಸೇರಿ ಈ ದೇಶದ ಗಡಿ ಕಾಯುವ ಯೋಧನಾಗಲಿ ಎಂದು ಯೋಚಿಸದೇ ಇರುವುದು ಬೇಸರ ತರುವ ವಿಚಾರ ಎಂಬುದಾಗಿ ಶಿರ್ವ ಗ್ರಾಮದ ನಿವೃತ್ತ ಯೋಧ ರಾಜೇಂದ್ರ ಪಾಟ್ಕರ್ ,ಕೋಡು ಗುಡ್ಡೆ ಅವರು ಹೇಳಿದ್ದಾರೆ.

ಕಳೆದ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಶಿರ್ವ ಮಹಿಳಾ ಮಂಡಲ(ರಿ)ಶಿರ್ವ ಇವರ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ಆಟಿದ ಕೂಟ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ಪ್ರತೀಯೊಂದು ಮನೆಗಳಲ್ಲಿಯೂ ಒಬ್ಬ ಸೈನಿಕ ಹುಟ್ಟಿಕೊಳ್ಳಬೇಕಾಗಿದೆ. ಇಂದು ದೇಶದ ಗಡಿಗಳನ್ನು ಕಾಯುವ ಕಾಯಕವನ್ನು ತಮ್ಮದಾಗಿಸಿಕೊಳ್ಳಲು ಮುಂದಾಗುವ ಯುವಕರ ಸಂಖ್ಯೆ ತೀರಾ ಕಡಿಮೆಯಾಗಿದೆ.ಯೋಧರಿಗೆ,ಅವರ ಕುಟುಂಬಕ್ಕೆ ಹಲವಾರು ಉತ್ತಮ ಸೌಲಭ್ಯಗಳನ್ನು ಸರ್ಕಾರ ಕೊಡುತ್ತಿದ್ದರೂ ಕಷ್ಟಪಟ್ಟು ದುಡಿಯುವ ಮನಸ್ಸು ಯಾರಿಗೂ ಇಲ್ಲ.ಪ್ರತೀಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಸೈನ್ಯಕ್ಕೆ ಸೇರುವಲ್ಲಿ ಪ್ರೇರಣೆ, ಮಾರ್ಗದರ್ಶನ ನೀಡಿ ತಯಾರು ಮಾಡಿದರೆ ಮಾತ್ರ ಮನೆಮನೆಗಳಲ್ಲಿ ಸೈನಿಕರು ಹುಟ್ಟಿಕೊಳ್ಳಲು ಸಾಧ್ಯವಿದೆ ಎಂಬುದಾಗಿ ಸಲಹೆನೀಡಿದರು.

ರೈತಾಪಿ ಜನರು ಆ ಕಾಲದಲ್ಲಿ ಉಪಯೋಗಿಸುತ್ತಿದ್ದ ನೇಗಿಲು,ನೊಗ,ಅಡಿಕೆ ಹಾಳೆಯ ಟೋಪಿ (ಗೋಂಪರ್) ಮುಟ್ಟಾಳೆಗಳೊಂದಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದೆ ಮೂಡುಬೆಳ್ಳೆಯ ಅಪ್ಪಿ ಪಾಣಾರ ಅವರು ತೆಂಬರೆ ಬಡಿಯುತ್ತಾ ಪಾಡ್ದನ ಹಾಡುತ್ತಾ ಬರುವುದರೊಂದಿಗೆ ವಿನೂತನ ರೀತಿಯಲ್ಲಿ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ವೇದಿಕೆಗೆ ಕರೆತರಲಾಯಿತು. ಇದರೊಂದಿಗೆ ವೇದಿಕೆಗೆ ಹೊತ್ತು ತಂದ ಸಿರಿತುಪ್ಪೆಗೆ ಹೂ ಅರ್ಪಿಸುವ ಮೂಲಕ ಶಿರ್ವದ ತೆರಿಗೆ ಸಲಹೆಗಾರರಾದ ರಮಾನಂದ ಶೆಟ್ಟಿಗಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ ಸಿರಿತುಪ್ಪೆಗೆ ಮಹಿಳೆಯರು ಪಂಚಾರತಿ ಬೆಳಗಿ ನಮಸ್ಕರಿಸಿದರು.

ಪುಷ್ಪಾ ಆಚಾರ್ಯ ಮತ್ತು ಪ್ರಮೀಳಾ ಅವರಿಂದ ಪ್ರಾರ್ಥನೆಯಾದ ಬಳಿಕ ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಗೀತಾ ವಾಗ್ಳೆ ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ನವೀನ್ ಶೆಟ್ಟಿ, ಕುತ್ಯಾರು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ನಾಲ್ವರು ಸದಸ್ಯರ ಮಕ್ಕಳನ್ನು ಕೂಡಾ ಅಭಿನಂದಿಸಲಾಯಿತು.

ಶಿರ್ವ ಪರಿಸರದ ಪುಟಾಣಿಗಳಿಗೆ ಗ್ರಾಮೀಣ ಸೊಗಡಿನ ಕುರಿತಾದ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಿದ್ದು ಬಹುಮಾನಗಳನ್ನು ವಿತರಿಸಲಾಯಿತು. ಮಹಿಳೆಯರಿಗೂ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಹಿಳಾ ಮಂಡಲದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಯಶ್ರೀ ಜಯಪಾಲ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಐರಿನ್ ಲಸ್ರಾದೋ , ಮಾಲತಿ ಮುಡಿತ್ತಾಯ ಮತ್ತು ಜ್ಯೋತಿ ಸುಧೀರ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಸುನೀತಾ ಕಳತ್ತೂರು ಬಹುಮಾನದ ಪಟ್ಟಿಯನ್ನು ವಾಚಿಸಿದರು.

ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ವಿಟ್ಠಲ ಆಂಚನ್, ಮಹಿಳಾ ಮಂಡಲದ ಕೋಶಾಧಿಕಾರಿ ದೀಪಾ ಶೆಟ್ಟಿ ,ಉಪಾಧ್ಯಕ್ಷೆ ಗೀತಾ ಮೂಲ್ಯ, ಅನಸೂಯಾ,ಸುಮಾ ಬಾಮನ್ ಶ್ವೇತಾ, ಸುನೀತಾ ಸದಾನಂದ, ಸುನೀತಾ ಶೆಟ್ಟಿ, ಜಯಶ್ರೀ ಶೆಟ್ಟಿ ಮಟ್ಟಾರು, ಅನಂತ್ರಾಯ ಶೆಣೈ ಮುಂತಾದವರು ಉಪಸ್ಥಿತರಿದ್ದರು.

ಜೊತೆ ಕಾರ್ಯದರ್ಶಿ ಗೌರಿ ಶೆಣೈ ವಂದಿಸಿದರು. ಹಿರಿಯ ಜಾನಪದ ಕಲಾವಿದೆ ಅಪ್ಪಿ ಪಾಣಾರ ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಎಲ್ಲರಿಗೂ ಆಟಿ ತಿಂಗಳ ಸಾಂಪ್ರದಾಯಿಕ ಖಾದ್ಯಗಳನ್ನು ಉಣ ಬಡಿಸಲಾಯಿತು


Spread the love
Subscribe
Notify of

0 Comments
Inline Feedbacks
View all comments