ಶ್ರೀಲಂಕಾ: ಯಶಸ್ಸು ಕಂಡ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ

Spread the love

ಶ್ರೀಲಂಕಾ: ಯಶಸ್ಸು ಕಂಡ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ

ಜಾಫ್ನಾ: ನೈನಾತೀವು ದ್ವೀಪದ ನಾಗಪೂಸಣಿ ಅಮ್ಮನ್ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಉತ್ಸವಕ್ಕೆ ದಿನಾಂಕ 18.06.2016ರಂದು ಕಾರ್ಯಕ್ರಮ ನೀಡಲು ಇಂಟರ್‍ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್ ಆಫ್ ಇಂಡಿಯಾ ಕಲಾವಿದರಿಗೆ ಆಮಂತ್ರಣ ನೀಡಲಾಗಿತ್ತು.

srilanka-festival

ಶ್ರೀಲಂಕಾದ ಖ್ಯಾತ ನಾಗಸ್ವರ ವಿದ್ವಾನ್ ಹಾಗೂ ಬಾಲಮುರುಗನ್ ಮಿತ್ರ ವೃಂದ ಜಾಫ್ನಾ ಇದರ ಅಧ್ಯಕ್ಷ ವಿದ್ವಾನ್ ಬಾಲಮುರುಗನ್ ಅವರು 13ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಂತ್ರಿಕತೆಯಲ್ಲಿ ಮುಂದುವರಿದ ದೇಶಕ್ಕಿಂತ ಸಾಂಸ್ಕೃತಿಕವಾಗಿ ಮುಂದುವರಿದ ದೇಶ ಶಾಂತಿ ಮತ್ತು ಸೌಹಾರ್ಧತೆಯ ಪ್ರತೀಕವಾಗಿರುತ್ತದೆ ಎಂದರು.

ಸಮಾರಂಭದ ಮುಖ್ಯ ಅತಿಥಿ ಮತ್ತು ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಡಾ. ಸುಬ್ರಮಣಿ ಎಂ. (ಪಲ್ಲವಿಮಣಿ) ಮಾತನಾಡಿ, ಶ್ರೀಲಂಕಾದಲ್ಲಿ ಇತ್ತೀಚೆಗೆ ಕಲೆ ಮತ್ತು ಸಂಸ್ಕೃತಿಗಳಿಗೆ ದೊರಕುತ್ತಿರುವ ಪೆÇ್ರೀತ್ಸಾಹ ಜಗತ್ತಿನ ಜನರ ಗಮನ ಸೆಳೆಯುತ್ತದೆ. ಆ ಕಾರಣದಿಂದಾಗಿ ನಮಗೆ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣವಕಾಶ ಒದಗಿಬಂದಿದೆ” ಎಂದರು.

ಮತ್ತೊರ್ವ ಮುಖ್ಯ ಅತಿಥಿ ಪ್ರತೀಷ್ಠಿತ ಟಿಎಸ್ಸಾರ್ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಶ್ರೀ ಗಂಗಾಧರ ಮೊದಲಿಯಾರ್ ಅವರು “ಕಲೆಗೆ ದೇಶಭಾಷೆಗಳು ಗಡಿಗಳಲ್ಲ ಅದು ಯಾರನ್ನಾದರೂ ಮತ್ತು ಎಷ್ಟೋ ದೂರದಲ್ಲಿರುವವರನ್ನಾದರೂ ಆಕರ್ಷಿಸಬಲ್ಲುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಭಾಂದವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ” ಎಂದರು. ಇಂಟರ್‍ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್ ಆಫ್ ಇಂಡಿಯಾ ಅಧ್ಯಕ್ಷ ಇಂ.ಕೆ.ಪಿ ಮಂಜುನಾಥ್ ಸಾಗರ್ ಮಾತನಾಡಿ ನಾವು ಈ ಸಂಘಟನೆಯನ್ನು ಹುಟ್ಟು ಹಾಕಿ ಎಂಟು ವರ್ಷಗಳಾದವು ಈ ಅವಧಿಯ 13 ದೇಶಗಳಲ್ಲಿ ಅಲ್ಲಿಯ ಸಂಘಟನೆಗಳ ಸಹಯೋಗದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಇದರ ಧ್ಯೇಯವಾಕ್ಯ “ಕಲೆ ಮತ್ತು ಸಾಹಿತ್ಯದ ಮೂಲಕ ಜಾಗತಿಕ ಸೌಹಾರ್ಧತೆಗೆ ಬಂದು ಕಿರು ಕೊಡುಗೆ”. ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಪೂರ್ಣ ಸಹಕಾರ ನೀಡಿದ ಬಾಲಮುರುಗನ್ ಮಿತ್ರ ವೃಂದದ ಪದಾಧಿಕಾರಿಗಳಿಗೆಲ್ಲರಿಗೂ ಧನ್ಯವಾದಗಳು” ಎಂದರು. ವೇದಿಕೆಯಲ್ಲಿ ಗಣ್ಯರಾದ ಡಾ.ನಾಗರಾಜ್ ಎ. ನಾಯಕ್ ಶ್ರೀ ಉಪೇಂದ್ರ ಶೆಟ್ಟಿ. ನಾಗಪೂಸಣಿ ಅಮ್ಮನ್ ದೇವಸ್ಥಾನ ಸಮಿತಿ ಸಮನ್ವಯಾಧಿಕಾರಿ ಶ್ರೀ ಸುಂದರಲಿಂಗಂ ಮುಂತಾದವರು ಉಪಸ್ಥಿತರಿದ್ದರು.

ಮುಂಬೈನ ಅರುಣೋದಯ ಕಲಾನಿಕೇತನದ ವಿದುಷಿ ಡಾ. ಮೀನಾಕ್ಷಿ ರಾಜುಶ್ರೀಯಾನ್ ಮತ್ತು ಶಿಷ್ಯೆಯರಿಂದ ನಡೆದ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ಸಂಗೀತ ವಾದ್ಯಗೋಷ್ಟಿಯಲ್ಲಿ ಬಾಲಾಜಿ ಬೆಂಗಳೂರು, ಮಂಜೇಶ್ವರ ಜಯರಾಂ, ನಟರಾಜ್ ಮಹಾಜನ್ ಗೋಕಾಕ್ ಮತ್ತು ಶ್ರೀಮತಿ ಗಿರಿಜಾ ಮಹಾಜನ್ ಪಾಲ್ಗೊಂಡಿದ್ದರು. ಎರಡೂ ತಂಡಗಳ ಉತ್ತಮ ಪ್ರದರ್ಶನಕ್ಕೆ ನೆರೆದ ಸಾವಿರಾರು ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚಿಗೆ ಸೂಚಿಸಿದರು.

ಹಿರಿಯ ಸಾಹಿತಿ ಬಿಂಡಿಗನವಿಲೆ ಭಗವಾನ್ ಮತ್ತು ಗೋ.ನಾ.ಸ್ವಾಮಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವನ್ನಿತ್ತರು.


Spread the love