ಶ್ರೀ ರಾಮ ಮಿತ್ರ ಭಜನಾ ಮಂದಿರದ ಶಿಲಾನ್ಯಾಸಕ್ಕೆ ಅಯೋಧ್ಯೆ ಶ್ರೀ ರಾಮಮಂದಿರ ಮೃತ್ತಿಕೆ : ಯಶ್ಪಾಲ್ ಸುವರ್ಣ

Spread the love

ಶ್ರೀ ರಾಮ ಮಿತ್ರ ಭಜನಾ ಮಂದಿರದ ಶಿಲಾನ್ಯಾಸಕ್ಕೆ ಅಯೋಧ್ಯೆ ಶ್ರೀ ರಾಮಮಂದಿರ ಮೃತ್ತಿಕೆ : ಯಶ್ಪಾಲ್ ಸುವರ್ಣ

ಉಡುಪಿ: ನವೆಂಬರ್ 20 ರಂದು ಮಲ್ಪೆ ಕುದ್ರುಕೆರೆಯ ಶ್ರೀರಾಮ ಮಿತ್ರ ಭಜನಾ ಮಂದಿರದ ನೂತನ ಮಂದಿರದ ಶಿಲಾನ್ಯಾಸಕ್ಕೆ ಹಿಂದೂ ಧರ್ಮದ ಪವಿತ್ರ ಕ್ಷೇತ್ರ ಅಯೋಧ್ಯೆ ಶ್ರೀ ರಾಮ ಮಂದಿರದ ಪವಿತ್ರ ಮೃತ್ತಿಕೆಯನ್ನು ಶ್ರೀ ರಾಮ ಮಂದಿರದ ಟ್ರಸ್ಟಿಗಳೂ, ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಉಡುಪಿ ಶಾಸಕ ಯಶ್ ಪಾಲ್ ಸುವರ್ಣರಿಗೆ ಹಸ್ತಾಂತರಿಸಿ ಮಲ್ಪೆ ಕುದ್ರುಕೆರೆಯಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರದಂತೆ ಶೀಘ್ರದಲ್ಲಿಯೇ ಭವ್ಯ ಭಜನಾ ಮಂದಿರ ನಿರ್ಮಾಣವಾಗಿ ಪ್ರಭು ಶ್ರೀರಾಮ ಸರ್ವರನ್ನೂ ಅನುಗ್ರಹಿಸಲಿ ಎಂದು ಆಶೀರ್ವಚನ ಮಾಡಿದರು.

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಅಯೋಧ್ಯೆಗೆ ತೆರಳಿದ್ದ ಭಜನಾ ಮಂದಿರದ ತಂಡ ಪೇಜಾವರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಂದಿರದ ಶಿಲಾನ್ಯಾಸಕ್ಕೆ ಮೃತ್ತಿಕೆ ತರುವ ಸಂಕಲ್ಪ ಈ ಹಿಂದೆಯೇ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಜನವರಿಯಲ್ಲಿ ಲೋಕಾರ್ಪಣೆ ಸಂದರ್ಭದಲ್ಲಿ 48 ದಿನಗಳ ಕಾಲ ನಿರಂತರ ಭಜನಾ ಸಂಕೀರ್ತನೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಜನಾ ಮಂದಿರದ ಭಜನಾ ತಂಡಗಳಿಗೆ ಹಾಗೂ ತುಳುನಾಡಿನ ನಾದಸ್ವರ, ಸ್ಯಾಕ್ಸೋಫೋನ್ ಸಹಿತ ಧಾರ್ಮಿಕ ವಾದ್ಯ ಸಂಗೀತಗಳಿಗೆ ಅವಕಾಶ ಒದಗಿಸುವಂತೆ ಪೇಜಾವರ ಶ್ರೀಪಾದರಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ   ಪ್ರಮೋದ್ ಮಧ್ವರಾಜ್, ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಟ್ರಸ್ಟಿಗಳಾದ  ಅನಿಲ್ ಮಿಶ್ರಾ,  ಗೋಪಾಲ್ ಜೀ., ಭಜನಾ ಮಂದಿರದ ಪ್ರಮುಖರಾದ  ಆನಂದ ಪಿ. ಸುವರ್ಣ,  ನಾಗರಾಜ ಸುವರ್ಣ,   ವಸುಮತೀಶ್ ಕಾಂಚನ್,  ವಿನಯ ಕರ್ಕೇರ,  ರವಿರಾಜ್ ಮೊದಲಾದವರು ಉಪಸ್ಥಿತರಿದ್ದರು.


Spread the love