ಸಂಜೆ ವೇಳೆ ಮತ್ತೆ ಬಿರುಸು ಪಡೆದ ವರ್ಷಧಾರೆ

Spread the love

ಸಂಜೆ ವೇಳೆ ಮತ್ತೆ ಬಿರುಸು ಪಡೆದ ವರ್ಷಧಾರೆ

  • ತಗ್ಗು ಪ್ರದೇಶಗಳಲ್ಲಿ ಮತ್ತೆ ನೀರು ಆವರಿಸಿಕೊಳ್ಳುವ ಭೀತಿ. ಜನರ ರಕ್ಷಣೆಗೆ ತಾಲೂಕಾಡಳಿತ ಸನ್ನದ್ದ.

ಕುಂದಾಪುರ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆ ಶುಕ್ರವಾರ ಬೆಳಿಗ್ಗೆ ಕೊಂಚ ಬಿಡುವು ಪಡೆದುಕೊಂಡು ಸಂಜೆಯ ಬಳಿಕ ಮತ್ತೆ ತನ್ನ ರೌದ್ರಾವತಾರವನ್ನು ಮುಂದುವರೆಸಿದೆ.

ಘಟ್ಟ ಪ್ರದೇಶದಲ್ಲಿ ಬೀಳುತ್ತಿರುವ ಮಳೆ ಹಾಗೂ ಇಲ್ಲಿ ಸುರಿಯುತ್ತಿರುವ ನೀರಿನ ಧಾರೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹರಿಯುತ್ತಿರುವ ವಾರಾಹಿ, ಸೌಪರ್ಣಿಕಾ ಪಂಚಗಂಗಾವಳಿ, ಕುಬ್ಜಾ ಮುಂತಾದ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಉಭಯ ತಾಲೂಕುಗಳಲ್ಲಿಯೂ ಗುರುವಾರ ಕಾಣಿಸಿಕೊಂಡಿದ್ದ ನೆರೆಯಿಂದಾಗಿ ಅವಾಂತರಗಳ ಸರಮಾಲೆಯೇ ವರದಿಯಾಗಿತ್ತು. ನಾವುಂದದ ಸಾಲ್ಬುಡ, ಸೇನಾಪುರದ ತೆಂಗಿನಗುಂಡಿ, ಸೌಕೂರಿನ ಕುದ್ರು, ಕುಚ್ಚಟ್ಟು ಮುಂತಾದ ಕಡೆಗಳಲ್ಲಿ ನೆರೆಯಿಂದಾಗಿ ಸ್ಥಳೀಯರು ಹೈರಾಣಾಗಿದ್ದರು. ಕೊಲ್ಲೂರಿನಲ್ಲಿ ಗುಡ್ಡ ಕುಸಿದು ಮಹಿಳೆಯೊಬ್ಬರ ಸಾವು ಸಂಭವಿಸಿತ್ತು. ಬೇಳೂರಿನ ದೇವಸ್ಥಾನಬೆಟ್ಟು ಎಂಬಲ್ಲಿ ವರಾಹಿ ನೀರಾವರಿ ಯೋಜನೆಯ ಕಾಲುವೆಯಿಂದ ಹರಿದ ನೀರು ಪರಿಸರದ ನೂರಾರು ಎಕರೆ ಕೃಷಿ ಗದ್ದೆಗಳನ್ನು ಆಪೋಷಣ ತೆಗೆದುಕೊಂಡಿತ್ತು. ಮಳೆಯ ಜೊತೆ ಸೇರಿಕೊಂಡಿದ್ದ ಗಾಳಿಯಿಂದಾಗಿ ಕೃಷಿ ತೋಟಗಳು ಧರಶಾಹಿಯಾಗಿದ್ದವು. ಅಮಾಸೆಬೈಲು, ಶಂಕರನಾರಾಯಣ, ಕೋಡಿ ಮುಂತಾದ ಪ್ರದೇಶಗಳಲ್ಲಿ ಜನರ ವಾಸ್ತವ್ಯದ ಮನೆಗಳಿಗೆ ಹಾಗೂ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯುಂಟಾಗಿತ್ತು.

ನೆಟ್ವರ್ಕ್ ಸಮಸ್ಯೆ:
ಕುಂದಾಪುರ, ಬೈಂದೂರು ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ದೂರವಾಣಿ ಬಳಕೆದಾರರ ಸ್ಥಿತಿ ಅಯೋಮಯವಾಗಿದೆ. ವಿದ್ಯುತ್ ಲೈನ್ಗಳ ದುರಸ್ತಿ ಕಾರ್ಯದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಬಸ್ಸುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿತ್ತು.

ಕೆಲಹೊತ್ತು ಬಿಸಿಲು:
ಶುಕ್ರವಾರ ಬೆಳಗ್ಗಿನ ವೇಳೆಗೆ ಬಾನಿನಲ್ಲಿ ಮೋಡ ಮಾಯವಾಗಿ ಒಂದಷ್ಟು ಹೊತ್ತು ಸೂರ್ಯನ ಬಿಸಿಲು ಕಾಣಿಸಿದ್ದರಿಂದ ವರುಣನ ಆರ್ಭಟ ಕಡಿಮೆಯಾಯಿತು ಎನ್ನುವ ಸಂತೋಷದಲ್ಲಿದ್ದ ಉಭಯ ತಾಲೂಕಿನ ಜನತೆಗೆ ಮಧ್ಯಾಹ್ನದ ವೇಳೆಯಲ್ಲಿ ಮತ್ತೆ ಪ್ರಾರಂಭವಾದ ವರುಣನ ವರ್ಷಧಾರೆ ನಿರಾಸೆಯನ್ನುಂಟು ಮಾಡಿದೆ. ಐದು ಗಂಟೆಯ ಬಳಿಕ ಕಪ್ಪನೆಯ ಮೋಡಗಳು ಆವರಸಿಕೊಂಡಿದ್ದು, ರಾತ್ರಿ ವೇಳೆ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಮಳೆಯೊಂದಿಗೆ ಗಾಳಿಯೂ ಸೇರಿಕೊಂಡಲ್ಲಿ ನದಿತೀರ ಪ್ರದೇಶಗಳು ಹಾಗೂ ತಗ್ಗು ಪ್ರದೇಶಗಳು ನೆರೆಯ ನೀರಿನಲ್ಲಿ ಜಲಾವೃತವಾಗುವ ಆತಂಕಗಳು ಇವೆ.

ಕುಂದಾಪುರದ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್, ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ತಹಸೀಲ್ದಾರ್ಗಳಾದ ಹೆಚ್.ಎಸ್ ಶೋಭಾಲಕ್ಷ್ಮೀ ಹಾಗೂ ಪ್ರದೀಪ್ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಗಳ ಮೇಲುಸ್ತುವಾರಿ ನಡೆಸಲಾಗುತ್ತಿದೆ.

ನೆರೆ ಹಾಗೂ ಜಲಾವೃತಗೊಳ್ಳುವ ಪ್ರದೇಶಗಳ ಜನರಿಗೆ ಮುನ್ಸೂಚನೆ ನೀಡಲಾಗಿದೆ. ರಕ್ಷಣಾ ತಂಡಗಳನ್ನು ಜಾಗೃತ ಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದ್ದು, ಅಗತ್ಯಬಿದ್ದಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪರಿಸ್ಥಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್, ಹೇಳಿದರು.

ನೆರೆ ನೀರು ನಿಂತು ಹೋದ ಮೇಲೆ..!
ನಾವುಂದ ಗ್ರಾ.ಪಂ ವ್ಯಾಪ್ತಿಯ ಸಾಲ್ಬುಡ, ಗುಲ್ವಾಡಿ ಗ್ರಾ.ಪಂ ವ್ಯಾಪ್ತಿಯ ಸೌಕೂರು ಪ್ರತೀ ವರ್ಷವೂ ಮುಳುಗಡೆಯಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಗುರುವಾರ ಸಂಪೂರ್ಣ ಜಲಾವೃತಗೊಂಡು ಜಲದಿಗ್ಭಂಧನದಲ್ಲಿದ್ದ ಜನತೆ, ಶುಕ್ರವಾರ ನೆರೆ ನೀರು ಇಳಿದಿದ್ದರಿಂದ ಕೊಂಚ ಮಟ್ಟಿಗೆ ಸುಧಾರಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರಸ್ತೆ ಸಂಚಾರ ಆರಂಭಗೊಂಡಿದೆಯಾದರೂ, ಕೃಷಿಗದ್ದೆಯಲ್ಲಿ ತುಂಬಿಕೊಂಡಿರುವ ನೀರು ಇನ್ನೂ ಇಳಿದಿಲ್ಲ. ಕೆಲ ದಿನಗಳ ಹಿಂದಷ್ಟೇ ನಾಟಿ ಮಾಡಿರುವ ಭತ್ತದ ಸಸಿಗಳು ಕೊಳೆತು ಹೋಗುವ ಆತಂಕದಲ್ಲಿ ಇಲ್ಲಿನ ರೈತರಿದ್ದಾರೆ. ನೆರೆಪೀಡಿತ ಪ್ರದೇಶಗಳಿಗೆ ಶುಕ್ರವಾರ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಆಲಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments