ಸಂತ ಆಂತೋನಿ ಆಶ್ರಮ, ಜೆಪ್ಪು; ಸ್ವರ್ಗಾರೋಹಣದ ಹಬ್ಬ ಮತ್ತು ದೇಶಕ್ಕಾಗಿ ಪ್ರಾರ್ಥನೆ

Spread the love

ಸಂತ ಆಂತೋನಿ ಆಶ್ರಮ, ಜೆಪ್ಪು; ಸ್ವರ್ಗಾರೋಹಣದ ಹಬ್ಬ ಮತ್ತು ದೇಶಕ್ಕಾಗಿ ಪ್ರಾರ್ಥನೆ

ಸಂತ ಆಂತೋನಿ ಆಶ್ರಮದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಗೋಪುರದ ಮುಂದೆ ಮಾತೆ ಮರಿಯಮ್ಮನವರ ಸ್ವರ್ಗರೋಹಣ ಹಬ್ಬದ ಪ್ರಯುಕ್ತ ಪ್ರಾರ್ಥನಾ ವಿಧಿ ನೆರವೇರಿಸಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ದೇಶಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು.

ಸಂಸ್ಥೆಯ ನಿರ್ದೇಶಕರಾದ ಫಾ. ಒನಿಲ್ ಡಿ’ಸೋಜರವರು ಸಾಮಾಜಿಕ ಜಾಲತಾಣದಲ್ಲಿ ಭಕ್ತರನ್ನು ಉದ್ದೇಶಿಸಿ ಪ್ರವಚನ ನೀಡುತ್ತಾ ಆಗಸ್ಟ್ 15, ಭಾರತೀಯ ಕಥೋಲಿಕರಿಗೆ ಇಮ್ಮಡಿಯ ಸಂಭ್ರಮದ ದಿನ. ದೇಶಕ್ಕಾಗಿ ಮಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿ ಹೆಮ್ಮೆಯಿಂದ ರಾಷ್ಟ್ರದ ದ್ವಜವನ್ನು ಹಾರಿಸಿ ಸಂಭ್ರಮಿಸುವ ದಿನ. ಈ ಸುದಿನದಂದು ಕಥೋಲಿಕ ಕ್ರೈಸ್ತರು ಮಾತೆ ಮರಿಯಮ್ಮನವರು ಸ್ವರ್ಗಾರೋಹಣದ ಹಬ್ಬವನ್ನು ಸಹ ಆಚರಿಸುತ್ತಾರೆ ಎಂದರು. ಯೇಸುವಿನ ತಾಯಿಯಾದ ಮಾತೆ ಮರಿಯಮ್ಮನವರ ಇಹಲೋಕದ ಬದುಕಿನಂತ್ಯಕ್ಕೆ ದೇವರು ಅವರನ್ನು ಶರೀರ- ಆತ್ಮ ಸಮೇತ ಸ್ವರ್ಗ ಲೋಕಕ್ಕೆ ಕರೆದೊಯ್ದರು. ಈ ಮೂಲಕ ದೇವರಿಗೆ ವಿಧೇಯರಾಗಿ ಮಾನವರ ಸೇವೆಯಲ್ಲಿ ಸತ್ಯ- ನ್ಯಾಯ- ನೀತಿಯ ಜೀವನವನ್ನು ಸಾರುತಾರೋ ಅವರೆಲ್ಲರಿಗೆ ಸ್ವರ್ಗ ಲೋಕದಲ್ಲಿ ದೇವರೊಂದಿಗೆ ಜೀವಿಸುವ ಅವಕಾಶ ಲಭಿಸುತ್ತದೆ ಎಂಬ ಭರವಸೆಯ ಸಂದೇಶ ಈ ಹಬ್ಬ ಸೂಚಿಸುತ್ತದೆ. ಮಾತೆ ಮರಿಯಮ್ಮನವರ ಮಾದರಿಯಲ್ಲಿ ದೇವರಿಗೆ ವಿಧೇಯರಾಗಿ ನಿಸ್ವಾರ್ಥ ಮನೋಭಾವದಿಂದ ದೇಶದ ಒಳಿತಿಗಾಗಿ ದುಡಿಯಲು ಭಕ್ತರಿಗೆ ಫಾ. ಡಿ’ಸೋಜರವರು ತಮ್ಮ ಪ್ರವಚನದಲ್ಲಿ ಕರೆ ನೀಡಿದರು.

ಸಂಸ್ಥೆಯ ಆಡಳಿತಾಧಿಕಾರಿಯಾದ ಫಾ. ಆಲ್ಬನ್ ರೊಡ್ರಿಗಸ್‍ರವರು ಮಾತೆ ಮರಿಯಮ್ಮನವರ ಗೌರವಾರ್ಥ ಜಪಸರ ಪ್ರಾರ್ಥನೆ ನಡೆಸಿಕೊಟ್ಟರು. ಜಪಸರ ಪ್ರಾರ್ಥನೆಯಲ್ಲಿ ದೇಶದ ಮುಖಂಡರಿಗಾಗಿ ಹಾಗೂ ಎಲ್ಲಾ ವರ್ಗದ ಜನರಿಗಾಗಿ, ಸರ್ವತೋಮುಖ ಅಭಿವೃಧ್ಹಿಗಾಗಿ ಮತ್ತು ಪ್ರತ್ಯೇಕವಾಗಿ ಕೋವಿಡ್ ಮಹಾಮಾರಿ ಆದಷ್ಟು ಬೇಗ ನಿವಾರಣೆಯಾಗಲಿ ಎಂದು ಪ್ರಾರ್ಥಿಸಲಾಯ್ತು. ‘ಮೊಗಾಚಿಂ ಲ್ಹಾರಾಂ’ ಖ್ಯಾತಿಯ ಶ್ರೀ. ವಿನ್ಸೆಂಟ್ ಫೆರ್ನಾಂಡಿಸ್ ಮತ್ತು ತಂಡದವರು ಭಕ್ತಿ ಗೀತೆಗಳನ್ನು ಹಾಡಿದರು. ಸಂಸ್ಥೆಯ ಸಹಾಯಕ ನಿರ್ದೇಶಕರಾದ ಫಾ. ರೋಶನ್ ಡಿ’ಸೋಜರವರು ಹಾಜರಿದ್ದರು.


Spread the love