ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ- ಜಿಲ್ಲಾ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ
ಮಂಗಳೂರು: ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ಅವರು ಶುಕ್ರವಾರ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಇಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಕೀಲರ ಸಂಘ ಮಂಗಳೂರು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಉದ್ಘಾಟಿಸಿ ಮಾತಾನಾಡಿದರು. ಖಿನ್ನತೆಯಿಂದ ಮೃತಪಡುವುದನ್ನು ತಡೆಗಟ್ಟಿ, ಯಶಸ್ವಿಯಾಗಿ ಒತ್ತಡ ನಿರ್ವಹಣೆ ಮಾಡಲು ಸಮುದಾಯದಲ್ಲಿ ಅರಿವು ಮೂಡಿಸುವ ಸಲುವಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಆತ್ಮಹತ್ಯೆ ತಡೆಗಟ್ಟಲು ಒಟ್ಟಾಗಿ ಕೆಲಸ ಮಾಡೋಣ ಎಂಬ ಘೋಷಣೆಯೊಂದಿಗೆ 2019ರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಎಲ್ಲ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ದೊಡ್ಡದು. ಮನುಷ್ಯ ಆರೋಗ್ಯವಾಗಿದ್ದರೆ ಎಲ್ಲಾ ರೀತಿಯ ಸಾಧನೆ ಮಾಡಲು ಸಾಧ್ಯ ಹೀಗಾಗಿ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಬೇಕು ಅದರಲ್ಲೂ ಮಾನಸಿಕ ಆರೋಗ್ಯ ಮುಖ್ಯ. ಕೋಟಿ ಕೋಟಿ ಹಣವಿದ್ದರೂ, ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಸಂಪತ್ತು ವ್ಯರ್ಥ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಸುಪ್ರಿಯನ್ ಮೊಂಥೆರೊ, ನಮ್ಮ ಕಾಲದಂತೆ ಇಂದಿನ ಕಾಲದ ಶಾಲಾ ವಾತಾವರಣ ಇಲ್ಲ, ಇಂದು ಹೆಚ್ಚಾಗಿ ಮಕ್ಕಳು ಬಹುಬೇಗ ಆತ್ಮಹತ್ಯೆಯಂತಹ ಕ್ರಿಯೆಗೆ ಮುಂದಾಗುತ್ತಿದ್ದಾರೆ. ಇದನ್ನು ತಡೆಯಲು ಮಕ್ಕಳು ಮಾನಸಿಕವಾಗಿ ಸದೃಢರಾಗಬೇಕು. ಸಾಮಾಜಿಕ ದುರ್ಘಟನೆಯನ್ನು ಎದುರಿಸುವ ಮನೋಬಲವನ್ನು ಮೂಡಿಸುವಂತಹ ವಿದ್ಯಾಭ್ಯಾಸ ನೀಡಬೇಕು ಎಂದರು.
ಜನತೆ ತೊಂದರೆ ಬಂದಾಗ ಅದನ್ನು ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು ಹೊರತಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ ಹಾಗೂ ದುಶ್ಚಟಗಳಿಗೆ ಬಲಿಯಾದವರನ್ನು ಸರಿಪಡಿಸುವ ಕೆಲಸವನ್ನು ಕೇವಲ ಇಲಾಖೆ, ಸಂಸ್ಥೆಗಳು ಮಾತ್ರ ಮಾಡುವುದು ಅಲ್ಲ ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆತ್ಮಹತ್ಯೆ ತಡೆಗಟ್ಟಲು ಹಲವಾರು ಅರಿವು ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾನಸಿಕ ರೋಗ ತಜ್ಞ ಡಾ. ಅನಿರುದ್ಧ ಶೆಟ್ಟಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ ಗಂಗಾಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ.ರಾಮಕೃಷ್ಣ ರಾವ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ರಾಜೇಶ್ವರಿದೇವಿ, ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ ಹಾಗೂ ಶಾಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













