ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವಲ್ಲಿ ಬಂಟ ಸಮುದಾಯದ ಕೊಡುಗೆ ಅಪಾರ – ಶೋಭಾ ಕರಂದ್ಲಾಜೆ

Spread the love

ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವಲ್ಲಿ ಬಂಟ ಸಮುದಾಯದ ಕೊಡುಗೆ ಅಪಾರ – ಶೋಭಾ ಕರಂದ್ಲಾಜೆ

ಉಡುಪಿ: ಬಂಟರು ಇಡೀ ಸಮಾಜದ ನೇತೃತ್ವ ವಹಿ ಸುವ ಸಮುದಾಯವಾಗಿದೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ನೇತೃತ್ವ ವಹಿಸುವ ಗಟ್ಟಿ ಸಮುದಾಯ ಆಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಅಭಿವೃದ್ಧಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಭಾನುವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ವಿಶ್ವ ಬಂಟರ ಸಮ್ಮೇಳನ ಪ್ರಯುಕ್ತ ಉಡುಪಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ತೆರೆದ ಮೈದಾನದಲ್ಲಿ ಹಮ್ಮಿಕೊಂಡಿರುವ ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತವಾದ ಕ್ರಾಂತಿ ಮಾಡಿರುವ ಈ ಸಮುದಾಯ, ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ದೇಶದ ರಕ್ಷಣೆ, ಅಭಿವೃದ್ಧಿ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಸಮುದಾಯದ ಕೊಡುಗೆ ಅಪಾರ. ಭೂತಸ್ಥಾನ, ನಾಗ, ದೇವಸ್ಥಾನ, ಗರಡಿಯಲ್ಲಿ ನಡೆಯುವ ಯಾವುದೇ ಕಾರ್ಯಗಳ ನೇತೃತ್ವವನ್ನು ಬಂಟ ಸಮುದಾಯ ವಹಿಸಿದರೆ ಅದು ಅಚ್ಚುಕಟ್ಟಾಗಿ ಇರುತ್ತದೆ. ಶಿಕ್ಷಿತ ಹಾಗೂ ಸುಸಂಸ್ಕೃತ ಸಮುದಾಯವಾಗಿರುವ ಬಂಟರು, ತಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ಹೊಂದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಬಂಟರದ್ದು ವೈಶಿಷ್ಟವಾದ ಬದುಕು. ಬಂಟರ ಬದುಕಿನಲ್ಲಿ ಸಾಕಷ್ಟು ಸೌಂದರ್ಯ ಪ್ರಜ್ಞೆ ಅಡಗಿದೆ. ಈ ಮೂಲಕ ಈ ಸಮುದಾಯ ಇಡೀ ದೇಶದ ಸಾಂಸ್ಕೃತಿಕ ಬದುಕಿಗೆ ಸಾಕಷಟು ಕೊಡುಗೆ ಕೊಟ್ಟಿದೆ ಎಂದರು.

ಸಿನೆಮಾ ರಂಗದಲ್ಲಿ, ಪ್ರದರ್ಶನ ಕಲೆಗಳಲ್ಲಿ ನಮ್ಮ ಸಮುದಾಯ ಹಲವು ದಿಗ್ಗಜ್ಜರು ಮಿಂಚಿದ್ದಾರೆ. ಸಾಂಸ್ಕೃತಿಕ ಬದುಕು ಬಿಟ್ಟು ಬಂಟರ ಬದುಕೇ ಇಲ್ಲ. ಕ್ರೀಡಾ ಮನೋಭಾವ ಕೂಡ ನಮ್ಮ ಸಮುದಾಯದಲ್ಲಿದೆ. ಸೌಂದರ್ಯ ಪ್ರಜ್ಞೆ ಹಾಗೂ ವಿಶಾಲ ಮನೋಧರ್ಮದಿಂದ ಬಂಟರ ಬದುಕೇ ವಿಶಿಷ್ಟವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಿದ್ದರು. ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯನ್ನು ಮುಂಬೈಯ ಹೇರಂಬ ಇಂಡಸ್ಟ್ರೀಸ್ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು.

ಶಾಸಕರಾದ ಗುರುರಾಜ್ ಗಂಟಿಹೊಳೆ, ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ,  ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ವೀಣಾ ಶೆಟ್ಟಿ, ಉದ್ಯಮಿಗಳಾದ ಬೆಲ್ಲಾಡಿ ಅಶೋಕ್ ಶೆಟ್ಟಿ, ರಾಜೇಂದ್ರ ವಿ.ಶೆಟ್ಟಿ, ಚಂದ್ರಿಕಾ ಹರೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಸಾಂಸ್ಕೃತಿಕ ವೈಭವದ ಸಹ ಸಂಚಾಲಕ ಕರ್ನೂರು ಮೋಹನ್ ರೈ ಮೊದಲಾದವರು ಉಪಸ್ಥಿತರಿದ್ದರು.

ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ವಂದಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಸಾಂಸ್ಕೃತಿಕ ವೈಭವದಲ್ಲಿ 22 ತಂಡಗಳು ಭಾಗವಹಿಸಿದ್ದವು.


Spread the love