ಸರ್ಕಾರಿ ಗೋಶಾಲೆ ಶೀಘ್ರದಲ್ಲಿ ಪ್ರಾರಂಭಿಸಲು: ಪ್ರಭಾರ ಜಿಲ್ಲಾಧಿಕಾರಿ ಸೂಚನೆ

Spread the love

ಸರ್ಕಾರಿ ಗೋಶಾಲೆ ಶೀಘ್ರದಲ್ಲಿ ಪ್ರಾರಂಭಿಸಲು: ಪ್ರಭಾರ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಕಡಬ ತಾಲೂಕಿನ ರಾಮ ಕುಂಜ ಗ್ರಾಮದಲ್ಲಿ ಸರ್ಕಾರಿ ಗೋಶಾಲೆ ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಜಿಲ್ಲಾ ಪಂಚಾಯತ್ ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್.ಕೆ ಸೂಚಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕುಮಾರಾಧಾರ ಸರ್ಕಾರಿ ಗೋಶಾಲೆ ಇದೇ ವರ್ಷ ಪ್ರಾರಂಭವಾಗಿದ್ದು, ಸದ್ಯ 98 ಜಾನುವಾರುಗಳನ್ನು ಸಾಕಣೆ ಮಾಡಲಾಗುತ್ತಿದೆ. ಮೆನ್ನಬೆಟ್ಟು ಗ್ರಾಮದ 19.80 ಎಕ್ರೆ ಗೋಮಾಳ ಪ್ರದೇಶವನ್ನು ಗೋಶಾಲೆಗೆ ಕಾಯ್ದೆರಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು. ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಹಾಗೂ ಆಸ್ಪತ್ರೆಯ ಉದ್ದೇಶವಾಗಿದೆ ಮತ್ತು ಪ್ರಾಣಿ ಕಲ್ಯಾಣ ಕಾರ್ಯಕರ್ತರನ್ನು ಗುರುತಿಸಿ ತಾಲೂಕು ಪ್ರಾಣಿ ಮಿತ್ರ ತಂಡ ರಚನೆ ಮಾಡಲು ಎಲ್ಲ ತಾಲೂಕ ಮುಖ್ಯ ಪಶು ವೈದ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪ್ರಾಣಿ ಕಲ್ಯಾಣ ಕಾಯ್ದೆ ಮತ್ತು ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಕಾನೂನುಬಾಹಿರ ಕಸಾಯಿ ಖಾನೆಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಾಗ ಅದರ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಪೆಟ್ ಶಾಪ್ ನಡೆಸುತ್ತಿರುವವರು ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಬೇಕು ಹಾಗೂ ಆಂಟಿ ಕ್ರುಯಾಲಿಟಿ ಇನ್ಸ್ಪೆಕ್ಟರ್ ನೇಮಕ ಮಾಡಲು ಮಾರ್ಗಸೂಚಿ ನೀಡಿದರು.
ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೈ ಟೆನ್ಷನ್ ವಿದ್ಯುತ್ ಬೇಲಿಗಳ ಬಗ್ಗೆ ತಪಾಸನೆ ನಡೆಸಿ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್ ಮರಿಯಪ್ಪ, ಜಿಲ್ಲಾ ಕಾನೂನು ಪ್ರಾಣಿ ಕಲ್ಯಾಣ ಸಲಹೆಗಾರ ಸುಮಾ ಆರ್ ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.


Spread the love