ಸಾಮಾಜಿಕ ಬದ್ದತೆಗೆ ಇನ್ನೊಂದು ಹೆಸರೇ ಸಂಪತ್ ಟ್ರೋಫಿ – ಚಂದ್ರ ಪೂಜಾರಿ

Spread the love

ಸಾಮಾಜಿಕ ಬದ್ದತೆಗೆ ಇನ್ನೊಂದು ಹೆಸರೇ ಸಂಪತ್ ಟ್ರೋಫಿ – ಚಂದ್ರ ಪೂಜಾರಿ

ಕುಂದಾಪುರ: ಸಾಮಾಜಿಕ ಬದ್ದತೆಗೆ ಇನ್ನೊಂದು ಹೆಸರೇ ಸಂಪತ್ ಟ್ರೋಫಿ. ನೊಂದ ಜೀವಗಳಿಗೆ ನೆರವಾಗುವ ಹಿತದೃಷ್ಠಿಯಿಂದ ಕಳೆದ ಐದು ವರ್ಷಗಳಿಂದಲೂ ಅಗಲಿದ ಗೆಳೆಯನ ನೆನಪಿಗಾಗಿ ಶ್ರೀರಾಮ್ ಕ್ರಿಕೆಟರ್ಸ್ ನಡೆಸುತ್ತಿರುವ ಸಂಪತ್ ಟ್ರೋಫಿ ವಿಭಿನ್ನ, ವಿಶಿಷ್ಟ ಪಂದ್ಯಾಟವಾಗಿ ಹೊರಹೊಮ್ಮುತ್ತಿದೆ ಎಂದು ಹೆಮ್ಮಾಡಿ ಬ್ರಹ್ಮಶ್ರೀ ನಾರಾಯಣಗುರು ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಹೇಳಿದರು.

ಭಾನುವಾರ ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀರಾಮ್ ಕ್ರಿಕೆಟರ್ಸ್ ಹೆಮ್ಮಾಡಿ ಇವರ ಆಶ್ರಯದಲ್ಲಿ ಸಥ ಐದನೇ ಬಾರಿಗೆ ಜರುಗಿದ 30 ಗಜಗಳ ಕ್ರಿಕೆಟ್ ಪಂದ್ಯಾಟ ಸಂಪತ್ ಟ್ರೋಫಿ-2024 ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಿಕೆಟ್ ಪಂದ್ಯಾಟದ ಲಾಭಾಂಶದ ಒಂದಷ್ಟು ಹಣವನ್ನು ಸಾಮಾಜಿಕ ಕೈಂಕರ್ಯಗಳಿಗೆ ಮೀಸಲಿಡುವ ಶ್ರೀರಾಮ್ ಕ್ರಿಕೆಟರ್ಸ್ ನ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು. ಸಂಪತ್ ಟ್ರೋಫಿಗೆ ಆರ್ಥಿಕ ಸಹಾಯ ಮಾಡಿದರೆ ನಮ್ಮ ಹಣ ದುಂದು ವೆಚ್ಚವಾಗುವುದಿಲ್ಲ ಎನ್ನುವ ರೀತಿಯಲ್ಲಿ ಈ ಸಂಸ್ಥೆಯ ಸದಸ್ಯರು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅಂತರಾಷ್ಟ್ರೀಯ ಮಟ್ಟದ ಜಾದುಗಾರ ಸತೀಶ್ ಹೆಮ್ಮಾಡಿ ಅವರನ್ನು ಸನ್ಮಾನಿಸಲಾಯಿತು.

ಗ್ರಾ.ಪಂ ಸದಸ್ಯ ರಾಘವೇಂದ್ರ ಪೂಜಾರಿ ಹೆದ್ದಾರಿಮನೆ, ಅಶ್ರಫ್ ಸಂತೋಷನಗರ, ನಾಗರಾಜ್ ಆಚಾರ್ಯ, ಶ್ರೀರಾಮ್ ಕ್ರಿಕಟರ್ಸ್ ನ ಅಧ್ಯಕ್ಷ ಸುರೇಶ್ ಪೂಜಾರಿ ಅರೆಕಲ್ಲುಮನೆ, ಸಂಸ್ಥೆ ಸದಸ್ಯರಾದ ನಾಗೇಂದ್ರ, ಜಗನ್ನಾಥ್, ಸಂದೀಪ್, ಶ್ರೀಕಾಂತ್ ಶೇರುಗಾರ್, ವಿನಯ, ಸುಕುಮಾರ್, ಶಶಿ, ನವೀನ್ ಮೊದಲಾದವರು ಉಪಸ್ಥಿತರಿದ್ದರು.

ಶ್ರೀರಾಮ್ ಕ್ರಿಕೆಟರ್ಸ್ ನ ಕಾರ್ಯದರ್ಶಿ ಶ್ರೀಕಾಂತ್ ಹೆಮ್ಮಾಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಸಂತ ಹೆಮ್ಮಾಡಿ ನಿರೂಪಿಸಿದರು.


Spread the love