ಸಾರ್ವಜನಿಕ ಕುಂದುಕೊರತೆಗೆ ಪ್ರಥಮಾದ್ಯತೆ ನೀಡಿ- ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ 

Spread the love

ಸಾರ್ವಜನಿಕ ಕುಂದುಕೊರತೆಗೆ ಪ್ರಥಮಾದ್ಯತೆ ನೀಡಿ- ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ 

ಮಂಗಳೂರು :  ಮುಖ್ಯಮಂತ್ರಿ ಜನತಾ ದರ್ಶನ, ಇ-ಜನಸ್ಪಂದನ, ಸಾರ್ವಜನಿಕ ಕುಂದುಕೊರತೆ ದೂರುಗಳನ್ನು ಆದ್ಯತೆ ಮೇಲೆ ಪರಿಗಣಿಸಿ ನಿರ್ಧಾರಗಳನ್ನು, ಹಿಂಬರಹಗಳನ್ನು ತಕ್ಷಣವೇ ನೀಡಿ ಎಂದು ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿ .ಪೊನ್ನುರಾಜ್ ಹೇಳಿದರು.

ಅವರಿಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ಅನುಷ್ಟಾನಕ್ಕೆ ತರುವ ತಮ್ಮದೇ ಇಲಾಖೆಯ ಕಾರ್ಯಕ್ರಮಗಳ ಪ್ರಗತಿಯನ್ನು ಪ್ರಸ್ತುತ ಪಡಿಸುವ ರೀತಿಯಿಂದಲೇ ಇಲಾಖೆಯಲ್ಲಿ ಕರ್ತವ್ಯದಲ್ಲಿ ತೊಡಗಿಕೊಂಡಿರುವ ಹಾಗೂ ಕರ್ತವ್ಯ ನಿರ್ವಹಿಸುವ ರೀತಿಯನ್ನು ತೋರಿಸುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ನಕಾರಾತ್ಮಕ ವರದಿಗಳು ಬಂದರೆ ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆಯಲ್ಲಿ ಮಾಹಿತಿ ಕೊರತೆಯನ್ನು ಕ್ಷಮಿಸುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಜನತಾದರ್ಶನದಡಿ ಒಟ್ಟು 23 ದೂರುಗಳು ಸ್ವೀಕೃತಗೊಂಡಿದ್ದು, 18 ದೂರುಗಳಿಗೆ ಸ್ಪಂದನೆ ನೀಡಲಾಗಿದೆ. ಉಳಿದ ದೂರುಗಳನ್ನು ಮರುಪರಿಶೀಲಿಸಿ ಸಾಧ್ಯವಾದ ಮಟ್ಟಿಗೆ ಜನಪರ ನಿರ್ಧಾರಗಳನ್ನು ಕೈಗೊಳ್ಳಿ ಎಂದು ಪೊನ್ನುರಾಜ್ ಹೇಳಿದರು.

ರಾಜ್ಯಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಿರುವ ವಿಷಯಗಳನ್ನು ಗಮನಕ್ಕೆ ತನ್ನಿ ಎಂದ ಉಸ್ತುವಾರಿ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯನ್ನೊಳಗೊಂಡಂತೆ ಬಿಸಿಎಂ, ಐಟಿಡಿಪಿ ಉಸ್ತುವಾರಿಯಲ್ಲಿ ನಿರ್ವಹಣೆಗೊಳ್ಳಪಟ್ಟಿರುವ ಹಾಸ್ಟೆಲ್‍ಗಳು, ಅಲ್ಲಿನ ಕಲಿಕಾ ಮಟ್ಟದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲಿಸಿದ ಅವರು ತೋಟಗಾರಿಕೆ ಇಲಾಖೆ ಬೆಳೆ ವಿಮೆ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. 2016 ನೇ ಸಾಲಿನಲ್ಲಿ ಬಾಕಿ ಇರುವ ತೋಟಗಾರಿಕೆ ವಿಮೆಯ ಬಗ್ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕಾರ್ಯದರ್ಶಿಗಳ ಗಮನಸೆಳೆದರಲ್ಲದೆ, ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯ ಕುರಿತು ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ವಿವರಿಸಿದರು.

ವಿವಿಧ ನಿಗಮಗಳಡಿ ಅನುಷ್ಟಾನಕ್ಕೆ ತರುತ್ತಿರುವ ಗಂಗಾಕಲ್ಯಾಣ ಕಾರ್ಯಕ್ರಮವನ್ನು ಪಂಚವಾರ್ಷಿಕ ಯೋಜನೆಯನ್ನಾಗಿಸದೆ ನಿಗದಿತ ಗುರಿಯನ್ನು ಸಮಯಮಿತಿಯೊಳಗೆ ಸಾಧಿಸಿ ಎಂದರು. ಮೆಸ್ಕಾಂನವರು ಗಂಗಾ ಕಲ್ಯಾಣ ಯೋಜನೆಯಡಿ ಸಂಪರ್ಕ ನೀಡುವಾಗ ಆದ್ಯತೆ ನೀಡಿ ಕೊಡಿ ಎಂಬ ಸೂಚನೆಯನ್ನು ಕಾರ್ಯದರ್ಶಿಗಳು ನೀಡಿದರು.

ನಿವೇಶನರಹಿತರ ಸಮೀಕ್ಷೆ ಹಾಗೂ ವಸತಿಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಸಿಇಒ ಡಾ ಎಂ ಆರ್ ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.


Spread the love