ಸಾಸ್ತಾನ ಟೋಲ್ ಹೋರಾಟ ತಾತ್ಕಾಲಿಕ ಅಂತ್ಯ – ಎರಡು ಬೇಡಿಕೆಗಳಿಗೆ ಜಿಲ್ಲಾಡಳಿತ ಹಾಗೂ ನವಯುಗ ಕಂಪೆನಿ ಒಪ್ಪಿಗೆ

Spread the love

ಸಾಸ್ತಾನ ಟೋಲ್ ಹೋರಾಟ ತಾತ್ಕಾಲಿಕ ಅಂತ್ಯ – ಎರಡು ಬೇಡಿಕೆಗಳಿಗೆ ಜಿಲ್ಲಾಡಳಿತ ಹಾಗೂ ನವಯುಗ ಕಂಪೆನಿ ಒಪ್ಪಿಗೆ

ಉಡುಪಿ: ಹೆದ್ದಾರಿ ಜಾಗೃತಿ ಸಮಿತಿ, ಸಾಸ್ತಾನ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಅಸಮರ್ಪಕ ಹೆದ್ದಾರಿ ಹಾಗೂ ಅವೈಜ್ಙಾನಿಕ ಕಾಮಗಾರಿ ಮತ್ತು ಸ್ಥಳೀಯ ವಾಹನಗಳಿಗೆ ಟೋಲ್ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ ಕೆಲವೊಂದು ಬೇಡಿಕೆಗಳ ಈಡೇರಿಕೆಯೊಂದಿಗೆ ತಾತ್ಕಾಲಿಕವಾಗಿ ಕೊನೆಗೊಂಡಿದೆ.

ಸುಮಾರು 130 ಕ್ಕೂ ಅಧಿಕ ಸಂಘಟನೆಗಳ ಬೆಂಬಲದೊಂದಿಗೆ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹಿಸಬಾರದು ಎಂಬ ಆಗ್ರಹವನ್ನು ಮಾಡಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಕೂಡ ದನಿಗೂಡಿಸಿದ್ದು ಜಿಲ್ಲಾಡಳಿತ ಮಧ್ಯಾಹ್ನದ ಹೊತ್ತಿಗೆ ಸಂಸದರು, ಶಾಸಕರು, ಹೋರಾಟ ಸಮಿತಿಯ ಸದಸ್ಯರು ಹಾಗೂ ನವಯುಗ ಸಂಸ್ಥೆಯ ಜೊತೆಗೆ ಉಡುಪಿಯ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಆಯೋಜಿಸಿತು.

ಸಭೆಯಲ್ಲಿ ಹಾಜರಿದ್ದ ಸಂಸದರು, ಶಾಸಕರು, ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ನವಯುಗ ಸಂಸ್ಥೆಯ ಮೇಲೆ ಸ್ಥಳೀಯ ಕೆ ಎ 20 ನೋಂದಣಿಯ ವಾಹನಗಳಿಗೆ ಕನಿಷ್ಟ 20 ಕಿಮಿ ವ್ಯಾಪ್ತಿಯಲ್ಲಿ ರಿಯಾಯತಿ ಹಾಗೂ ಟೂರಿಸ್ಟ್ ವಾಹನಗಳಿಗೂ ರಿಯಾಯತಿ ನೀಡುವಂತೆ ಆಗ್ರಹಿಸಿದರು. ಆದರೆ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಮನವಿಗೆ ಕಂಪೆನಿ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡದೆ ಸಭೆ ವಿಫಲವಾಯಿತು.

ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕನಿಷ್ಠ 5 ಕಿಮಿ ವ್ಯಾಪ್ತಿಯ ಬಿಳಿ ಬೋರ್ಡ್ ವಾಹನಗಳಿಗೆ ಆದರೂ ಉಚಿತವಾಗಿ ಬಿಡಲು ಕೋರಿದರು. ಅದಕ್ಕೂ ಕೂಡ ಸ್ಪಂದನೆ ಮಾಡದ ಕಂಪೆನಿಯ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಕಂಪೆನಿಯ ಪ್ರತಿನಿಧಿಗಳು ಪ್ರತ್ಯೇಕ ಸಭೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ ಬಳಿಕ ಹೋರಾಟಗಾರರು ಮತ್ತು ಶಾಸಕರು, ಸಂಸದರು ವಾಪಾಸು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನದಲ್ಲಿ ಸಫಲರಾದರು.

ಬಳಿಕ ಮಾತನಾಡಿದ ಸಂಸದರು ಮಾಬುಕಳದಿಂದ ಕೋಟದ ಕರಿಕಲ್ಲು ಕಟ್ಟೆ ತನಕ ಅಂದರೆ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ವರೆಗೆ ಉಚಿತವಾಗಿ ಬಿಡಲು ಕಂಪೆನಿ ಒಪ್ಪಿಕೊಂಡಿದೆ. ಅಲ್ಲದೆ ಹಳದಿ ಬೋರ್ಡಿನ ವಾಹನಗಳ ಪಟ್ಟಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೀಡಲು ಅವರು ಸೂಚಿಸಿದ್ದು ಅವರಿಗೂ ಸಹ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲು ಪ್ರಯತ್ನಿಸುವುದಾಗಿ ಎಸ್ಪಿಯವರು ತಿಳಿಸಿದ್ದಾರೆ. ಇನ್ನೊಂದು ಬೇಡಿಕೆಯಾಗಿರುವ ಇಡೀ ಜಿಲ್ಲೆಯ ಟ್ಯಾಕ್ಸಿಗಳಿಗೆ ಕಡಿಮೆ ದರದಲ್ಲಿ ಪಾಸ್ ನೀಡಬೇಕು ಎಂಬ ಬೇಡಿಕೆ ಶಾಸಕ ರಘುಪತಿ ಭಟ್ ಅವರು ಇಟ್ಟಿದ್ದು ಇದಕ್ಕೆ ಜಿಲ್ಲಾಡಳಿತವಾಗಲಿ ನವಯುಗ ಕಂಪೆನಿಯಾಗಲಿ ಯಾವುದೇ ರೀತಿಯ ಸ್ಪಂದನೆ ನೀಡಲು ವಿಫಲವಾಗಿದೆ ಅದಕ್ಕಾಗಿ ಡಿಸೆಂಬರ್ 22 ರ ಬಳಿಕ ಮತ್ತೆ ಇದಕ್ಕಾಗಿ ಹೋರಾಟ ನಡೆಸಲು ಟ್ಯಾಕ್ಸಿಮೆನ್ ಎಸೋಶಿಯೇಶನ್ ನಿರ್ದಾರ ಮಾಡಿದ್ದು ಅದಕ್ಕೆ ತಮ್ಮ ಬೆಂಬಲವಿದೆ. ಸದ್ಯ ಇಂದಿನ ಹೋರಾಟದ ಫಲವಾಗಿ ನಮ್ಮ ಎರಡು ಬೇಡಿಕೆಗಳು ಈಡೇರಲು ಸಾಧ್ಯವಾಗಿದೆ ಎಂದರು.

ಬಳಿಕ ಪ್ರತಿಭಟನಾಕಾರರೆಲ್ಲರೂ ಜನಪ್ರತಿನಿಧಿಗಳೊಂದಿಗೆ ಸೇರಿ ಟೋಲ್ ಗೆ ಮೆರವಣಿಗೆ ಮೂಲಕ ಸಾಗಲು ಯತ್ನಿಸಿ ರಸ್ತೆ ತಡೆಯನ್ನು ನಡೆಸಿದರು. ಈ ವೇಳೆ ಪೊಲೀಸರು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಸಹಿತ ಪ್ರತಿಭಟನಾಕಾರರನ್ನು ಸಾಂಕೇತಿಕವಾಗಿ ಬಂಧಿಸಿದರು. ಈ ಮೂಲಕ ಟೋಲ್ ವಿರುದ್ದದ ಕೋಟ ಬಂದ್ ಶಾಂತಿಯುತವಾಗಿ ಕೊನೆಗೊಂಡಿತು.


Spread the love