ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ಸಂಭ್ರಮದ ಮೊಂತಿ ಫೆಸ್ತ ಆಚರಣೆ
ಉಡುಪಿ: ಕನ್ಯಾ ಮರಿಯಮ್ಮನವರ ಹುಟ್ಟು ಹಬ್ಬವಾದ ಮೊಂತಿ ಫೆಸ್ತ್ ಹಾಗೂ ಹೊಸ ಫಸಲಿನ ಹಬ್ಬವಾದ ತೆನೆ ಹಬ್ಬವನ್ನು ಕ್ರೈಸ್ತರು ಭಾನುವಾರ ಬ್ರಹ್ಮಾವರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಿದರು.
 
  
 
ಸಾಸ್ತಾನದ ಸಂತ ಅಂತೋನಿಯವರ ಚರ್ಚಿನಲ್ಲಿ ಧರ್ಮಗುರು ವಂ|ಜಾನ್ ವಾಲ್ಟರ್ ಮೆಂಡೊನ್ಸಾ ಅವರ ನೇತೃತ್ವದಲ್ಲಿ ಹಬ್ಬದ ಆಚರಣೆ ಜರುಗಿತು. ಮಕ್ಕಳು ಮೆರವಣಿಗೆಯಲ್ಲಿ ಮಾತೆ ಮೇರಿ ಪ್ರತಿಮೆಗೆ ಹೂಗಳನ್ನು ಅರ್ಪಿಸಿದರು. ಧರ್ಮಗುರುಗಳು ಹೊಸ ತೆನೆಯನ್ನು ಆಶೀರ್ವಚಿಸಿ ಹಬ್ಬದ ಸಂದೇಶವನ್ನು ನೀಡಿದರು. ಬಳಿಕ ಪ್ರತಿಯೊಬ್ಬರಿಗೂ ಅವರು ಹೊಸ ತೆನೆಯನ್ನು ವಿತರಿಸಿ ಆಶೀರ್ವದಿಸಿದರು.
 
 
ಇದೇ ವೇಳೆ ಹೂ ತಂದ ಮಕ್ಕಳಿಗೆ ಕಬ್ಬನ್ನು ಕೂಡ ವಿತರಿಸಲಾಯಿತು. ಅಲ್ಲದೆ ಚರ್ಚಿನ ಮಹಿಳಾ ಸಂಘಟನೆಯ ಆಶ್ರಯದಲ್ಲಿ ಸಾಮೂಹಿಕವಾಗಿ ಹೊಸ ತೆನೆಯನ್ನು ಸೇರಿಸಿದ ಪಾಯಸವನ್ನು ವಿತರಿಸಲಾಯಿತು. ಚರ್ಚಿನ ಸಾಮೂಹಿಕ ಪೂಜೆಯ ಬಳಿಕ ಮನೆಗೆ ತೆರಳಿದ ಕ್ರೈಸ್ತರು ಹೊಸ ಭತ್ತದ ತೆನೆಯಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸವಿದರು.
ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್, ಬಾರ್ಕೂರು ಸಂತ ಪೀಟರ್ ಚರ್ಚ್, ಬ್ರಹ್ಮಾವರ ಸೈಂಟ್ ಮೇರಿಸ್ ಸೀರಿಯನ್ ಕ್ಯಾಥೆಡ್ರಲ್, ಸಾಸ್ತಾನ ಸಂತ ತೋಮಸ್ ಚರ್ಚ್ ಇನ್ನಿತರ ಚರ್ಚುಗಳಲ್ಲಿ ಕೂಡ ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
 
            
