ಸಾಹಿತಿ, ಚಿತ್ರಕಲಾವಿದ ಪುನರೂರು ರಾಜಗೋಪಾಲ ಆಚಾರ್ಯ ನಿಧನ

Spread the love

ಸಾಹಿತಿ, ಚಿತ್ರಕಲಾವಿದ ಪುನರೂರು ರಾಜಗೋಪಾಲ ಆಚಾರ್ಯ ನಿಧನ

ಉಡುಪಿ: ಸಾಹಿತಿ, ಚಿತ್ರಕಲಾವಿದ ಪುನರೂರು ರಾಜಗೋಪಾಲ ಆಚಾರ್ಯ (ಆರ್ಯ) ಅವರು ಶುಕ್ರವಾರ ಮಧ್ಯಾಹ್ನ ಉಡುಪಿಯಲ್ಲಿ ನಿಧನರಾದರು.

ವೇದ – ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಅವರು ಅಷ್ಟೇ ಪ್ರಗತಿಪರ ನಿಲುವುಗಳನ್ನು ಹೊಂದಿದ್ದರು. ಮೂಲತಃ ಉಡುಪಿಯವರಾದರೂ ಬಹುಕಾಲ ಧಾರವಾಡದಲ್ಲಿಯೇ ನೆಲೆಸಿ, ಅಲ್ಲಿನ ಸಾಹಿತಿ, ಚಿತ್ರಕಲಾವಿದರಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

ಅವರು ದಾರವಾಡಕ್ಕೆ ಹೋಗುವ ಮೊದಲು ಉಡುಪಿಯ ಶಿರೂರು ಮಠದಲ್ಲಿ ಸುಮಾರು 8 ವರ್ಷಗಳ ಮಠಾಧೀಶರಾಗಿದ್ದರು. ಅಲ್ಲದೇ ಅವರು ಪ್ರಸ್ತುತ ಶಿರೂರು ಮಠಾಧೀಶರಾಗಿರುವ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಪೂರ್ವಾಶ್ರಮದ ಸಹೋದರರಾಗಿದ್ದರು.

1945ರಲ್ಲಿ ಜನಿಸಿದ್ದ ಆಚಾರ್ಯರು ತಮ್ಮ 20ನೇ ವಯಸ್ಸಿನಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿ, ಶಿರೂರು ಮಠದ ಸ್ವಾಮೀಜಿಯಾಗಿ ಪೀಠಾರೋಹಣ ಮಾಡಿದ್ದರು. ಇದೇ ಸಂದರ್ಭದಲ್ಲಿ ಪದವಿ ವ್ಯಾಸಂಗವನ್ನು ನಡೆಸಿದರು. ಆ ಕಾಲದಲ್ಲಿಯೇ ಮಠದಲ್ಲಿ ಒಳ್ಳೆಯ ಗ್ರಂಥಾಲಯವನ್ನು ಆರಂಭಿಸಿದ್ದ ಅವರು ವಿಪರೀತ ಸಂಗೀತ ಮತ್ತು ಸಾಹಿತ್ಯಾಸಕ್ತರಾಗಿದ್ದರು. ಅವರ ಪ್ರಗತಿಪರ ಮನಸ್ಸು ಜನರು ತಮ್ಮ ಕಾಲಿಗೆ ಬೀಳುವುದು, ಪಾದ ಪೂಜೆ ಮಾಡುವುದು ಒಪ್ಪುತ್ತಿರಲಿಲ್ಲ, ಸನ್ಯಾಸಾಶ್ರಮಕ್ಕೆ ತಾವು ನ್ಯಾಯ ಸಲ್ಲಿಸುವುದಕ್ಕಾಗುವುದಿಲ್ಲ ಎಂದು 28ನೇ ವಯಸ್ಸಿನಲ್ಲಿ ಪೀಠವನ್ನು ತ್ಯಜಿಸಿದರು.

ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ಸೇರಿ, ದಾರವಾಡದಲ್ಲಿ ನೆಲೆಸಿದರು, ಅಲ್ಲಿಯೇ ಮದುವೆಯಾಗಿ ಸನ್ಯಾಸಾಶ್ರಮವನ್ನೂ ತ್ಯಜಿಸಿದರು.

ಈ ನಡುವೆ ಸಂಸ್ಕೃತದಲ್ಲಿ ಎಂ.ಎ. ಮಾಡಿದರು, ತಾವೇ ಸ್ವತಃ ಚಿತ್ರಕಲೆಯನ್ನೂ ಕರಗತ ಮಾಡಿಕೊಂಡರು. ನಡುವೆ ಸಾಹಿತ್ಯ ಕೃಷಿಯನ್ನೂ ನಡೆಸಿದರು.

ವೇದ, ಉಪನಿಷತ್ತುಗಳ ಬಗ್ಗೆ ಇಂಗ್ಲೀಷ್ ಭಾಷೆಯಲ್ಲಿ ಕೃತಿಗಳನ್ನು ರಚಿಸಿರುವ ಅವರು ಮನುಷ್ಯ ಎಂಬ ಕಾವ್ಯ, ಯಜ್ಞ, ಪಾತಾಳ ಗರುಡಿ, ಬಯಲು ಆಲಯದೊಳಗೊ, ಭ್ರೂಣ, ಮಳೆ ಬಂತು, ಬೇಟೆ, ಅವಿಮಾರಕಮ್ ಎಂಬ ನಾಟಕಗಳನ್ನೂ, ದೇಸಿ ಪರದೇಸಿ ಕತೆಗಳು, ದೃಷ್ಟ, ಕೊಕ್ಕರೆ ತಾತ ಂಬ ಕತಾಸಂಕಲನಗಳನ್ನು, ಗುರು ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ದಕ್ಷಿಣ ಏಶ್ಯಾದಲ್ಲಿ ಇತಿಹಾಸ ಚಿಂತನೆ (ಮೂಲ:ಮಿಖಾಯೆಲ್ ಗೊಟ್‍ಲೊಬ್) ಎಂಬ ಅನುವಾದ ಕೃತಿಯನ್ನು ರಚಿಸಿದ್ದಾರೆ. ಅವರು ನಿರ್ದೇಶಿಸಿದ್ದ ಕಿಪಾತಿ ಎಂಬ ಸಿನೆಮಾಕ್ಕೆ ರಾಷ್ಟ್ರಪ್ರಶಸ್ತಿ ಕೂಡ ದೊರಕಿದೆ.

ತಮ್ಮ ಚಿತ್ರಕಲೆಯಿಂದಾಗ ಆರ್ಯ ಅವರು ದೇಶವಿದೇಶಗಳಲ್ಲಿ ಪ್ರಸಿದ್ದರಾಗಿದ್ದಾರೆ. 80 ದಶಕದಲ್ಲಿ ನವ್ಯ ಚಿತ್ರಕಲಾವಿದರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಅವರ ಕಲಾಕೃತಿಗಳು ಫ್ರಾನ್ಸ್, ಇಟಲಿ, ಜರ್ಮನಿ, ಯು.ಕೆ., ನೆದರ್ಲ್ಯಾಂಡ್ ಮುಂತಾದ ದೇಶಗಳಲ್ಲಿಯೂ ಪ್ರದರ್ಶನ ಕಂಡಿವೆ. ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪುರಸ್ಕಾರವನ್ನೂ ಪಡೆದಿದ್ದರು. ಧಾರವಾಡದ ಕಲಾಮಂಡಲದ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಉಡುಪಿ ಪೇಜಾವರ ಶ್ರೀಗಳ ಆತ್ಮಕತೆಯನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ರಚಿಸಿದ್ದ ಆರ್ಯರು, ಇತ್ತೀಚೆಗೆ ಉಡುಪಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅಲ್ಪಕಾಲ ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ಪತ್ರೆಯಲ್ಲಿ ಶುಕ್ರವಾರ 12 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.


Spread the love