ಸಿದ್ದರಾಮಯ್ಯರ ಹೆಸರು ಹೇಳಲಿಕ್ಕೂ ಶೋಭಾಗೆ ಯೋಗ್ಯತೆ ಇಲ್ಲ: ಖಾದರ್ ತಿರುಗೇಟು

ಸಿದ್ದರಾಮಯ್ಯರ ಹೆಸರು ಹೇಳಲಿಕ್ಕೂ ಶೋಭಾಗೆ ಯೋಗ್ಯತೆ ಇಲ್ಲ: ಖಾದರ್ ತಿರುಗೇಟು

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳಲಿಕ್ಕೂ ಕೂಡ ಸಂಸದೆ ಶೋಭಾ ಕರಂದ್ಲಾಜೆಗೆ ಯೋಗ್ಯತೆ ಇಲ್ಲ ಎಂದು ಸಚಿವ ಯು.ಟಿ ಖಾದರ್ ತಮ್ಮ ನಾಯಕರ ಬಗ್ಗೆ ಮಾತನಾಡಿದ್ದಕ್ಕೆ ತಿರುಗೇಟು ನೀಡಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರ ಹೆಸರು ಹೇಳಲಿಕ್ಕೂ ಕೂಡ ಶೋಭಾ ಅವರಿಗೆ ಯೋಗ್ಯತೆ ಇಲ್ಲ. ಬಿಜೆಪಿ ಸಹೋದರರಿಗೆ ಹೇಳುವುದೇನೆಂದರೆ ದಯವಿಟ್ಟು ನಮ್ಮ ಪಕ್ಷದಲ್ಲಿ ಗೊಂದಲ ಸೃಷ್ಠಿಸಬೇಡಿ. ನಮ್ಮ ಮೈತ್ರಿಯನ್ನ ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ತನ್ನ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಬಳಿಕ ರಾಜ್ಯದಲ್ಲಿ ಸಿಎಂ ಸ್ಥಾನದ ಬಗ್ಗೆ ನಡೆಯುತ್ತಿರುವ ಚರ್ಚೆ ವಿಚಾರವಾಗಿ ನಾನು ಏನು ಮಾತನಾಡುವುದಿಲ್ಲ. ಇಲ್ಲಿ ನಾವು ಉಪಚುನಾವಣೆಗೆ ಬಂದಿದ್ದೇವೆ. ಎಲ್ಲ ವಿಚಾರದಲ್ಲೂ ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೋಭಾ ಕರಂದ್ಲಾಜೆ ಹೇಳಿದ್ದೇನು?
ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನ ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನ ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಅವರ ಶಾಸಕರನ್ನು ಹಿಡೆದಿಟ್ಟುಕೊಳ್ಳಲು ಆಗಲ್ಲ, ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದರು.