ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದಿಂದ ಕೆಥೋಲಿಕ್‌ ಕ್ಲಬ್‌ ನಿಂದ ಅಂಬೇಡ್ಕರ್‌ ವೃತ್ತದವರೆಗೆ ಸ್ವಚ್ಛತೆ

Spread the love

ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದಿಂದ ಕೆಥೋಲಿಕ್‌ ಕ್ಲಬ್‌ ನಿಂದ ಅಂಬೇಡ್ಕರ್‌ ವೃತ್ತದವರೆಗೆ ಸ್ವಚ್ಛತೆ

ಮಂಗಳೂರು: ಬಂಟ್ಸ್‌ ಇಂಟರ್‌ನ್ಯಾಷನಲ್‌ ವೆಲ್‌ಫೇರ್‌ ಸಂಘದ ಅಧ್ಯಕ್ಷ ಎ. ಸದಾನಂದ ಶೆಟ್ಟಿ ನೇತೃತ್ವದಲ್ಲಿ ಈಚೆಗೆ ಕೆಥೋಲಿಕ್‌ ಕ್ಲಬ್‌ ನಿಂದ ಅಂಬೇಡ್ಕರ್‌ ವೃತ್ತದವರೆಗೆ ಸ್ವಚ್ಛ ಭಾರತ ಅಭಿಯಾನ ನಡೆಯಿತು.

ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ವೇದವ್ಯಾಸ ಕಾಮತ್‌ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳಿನ್‌ಕುಮಾರ್‌, ‘ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತಾ ಅಭಿಯಾನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ ಸ್ವಚ್ಛತಾ ಅಭಿಯಾನ ಕೈಗೊಂಡಿರುವುದು ಪ್ರಶಂಸನೀಯ. ಸಮಾಜ ಸೇವೆಯ ಮೂಲಕ ಸೌಹಾರ್ದತೆಯಿಂದ ಜೀವನ ಸಾಗಿಸುವುದು ಅಗತ್ಯ’ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ‘ನಗರದ ವಿವಿಧೆಡೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಸ್ವಚ್ಛತೆ ಕೈ ಗೊಂಡಿವೆ. ಸುಂದರ ರಾಮ ಶೆಟ್ಟಿ ಅಭಿಮಾನಿ ಬಳಗದವರು ಈ ಅಭಿಯಾನದಲ್ಲಿ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ, ಎ. ಸದಾನಂದ ಶೆಟ್ಟಿ, ‘2017ರ ಮೇ 24ರಂದು ಸರ್ಕಾರ ಈ ರಸ್ತೆಗೆ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲು ಆದೇಶ ನೀಡಿದೆ. ಅಧಿಕೃತವಾಗಿ ನಾಮಕರಣ ಮಾಡುವಂತೆ ವಿಜಯ ಬ್ಯಾಂಕ್‌ ವರ್ಕರ್ಸ್‌ ಆರ್ಗನೈಸೇಷನ್‌ ಮಹಾನಗರ ಪಾಲಿಕೆಗೆ ಈಗಾಗಲೇ ಮನವಿ ಮಾಡಿದೆ. ಪಾಲಿಕೆ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಬಂಟರ ವಿವಿಧ ಸಂಘಟನೆಗಳು, ವಿಜಯ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳು, ವಿಜಯ ಬ್ಯಾಂಕ್‌ ನಿವೃತ್ತ ಕ್ಷೇಮಾಭಿವೃದ್ಧಿ ಸಂಘ, ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ದೇವಿಚರಣ್‌ ಶೆಟ್ಟಿ ವಂದಿಸಿದರು. ರಾಜ್‌ಗೋಪಾಲ ರೈ ನಿರೂಪಿಸಿದರು.


Spread the love