ಸೆಲ್ಫಿ ವಿತ್ ಗ್ರೀನ್ ಬಳಿಕ ಹೆದ್ದಾರಿ ಪಕ್ಕ ಗಿಡ ನೆಡುವ ಸಾಸ್ತಾನ ಮಿತ್ರರ ಹೊಸ ಪ್ರಯತ್ನ

ಸೆಲ್ಫಿ ವಿತ್ ಗ್ರೀನ್ ಬಳಿಕ ಹೆದ್ದಾರಿ ಪಕ್ಕ ಗಿಡ ನೆಡುವ ಸಾಸ್ತಾನ ಮಿತ್ರರ ಹೊಸ ಪ್ರಯತ್ನ

ಪ್ರತಿ ಭಾನುವಾರ ಹೆದ್ದಾರಿ ಪಕ್ಕದಲ್ಲಿ ಗಿಡ ನೆಡುವ ಕಾಯಕ: ಸೆಲ್ಫಿ ವಿತ್ ಗ್ರೀನ್ ಬಳಿಕ ಸಾಸ್ತಾನ ಮಿತ್ರರ ಪರಿಸರ ಉಳಿಸುವ ಹೊಸ ಪ್ರಯತ್ನ

ಕೋಟ: ಸುರತ್ಕಲ್ ನಿಂದ ಕುಂದಾಪುರದವರೆಗೆ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ಹಿಂದೆ ಸಾಕಷ್ಟು ಸೊತ್ತು ನಾಶವಾಗಿದೆ. ಅದರಲ್ಲಿ ಇಕ್ಕೆಲದಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತ ಸಾವಿರಾರು ಮರಗಳು ಕೂಡ ರಸ್ತೆ ಅಭಿವೃದ್ಧಿಗೆ ಬಲಿಯಾಗಿದ್ದವು. ಆದರೆ ಮರ ಕಡಿಯುವಾಗ ಕಾಮಗಾರಿ ಪಡೆದ ಕಂಪೆನಿಯ ಕೇಸುಗಳ ತೀರ್ಮಾನದ ಬಳಿಕ ಒಂದು ಮರದ ಬದಲಿಗೆ ಮೂರು ಗಿಡ ನೆಡುವ ಭರವಸೆ ನೀಡಿದ್ದರು. ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ ಆದರೆ ಕಂಪೆನಿ ಮಾಡಿದ ವಾಗ್ದಾನ ಮರೆತಿದೆ. ಸದ್ಯ ಹೆದ್ದಾರಿಯ ಪಕ್ಕದ ಮರದ ಕಡಿದ ಬಳಿಕ ವಾತಾವರಣದಲ್ಲಿ ಉಷ್ಣತೆ ಹೆಚ್ಚಿದೆ. ಇದರಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಲು ಸ್ಥಳೀಯ ಉತ್ಸಾಹಿ ಯುವಕರು ಮುಂದೆ ಬಂದಿದ್ದಾರೆ. ಪ್ರಕೃತಿ ಸಮತೋಲನ ಕಾಪಾಡಲು ಸಾಸ್ತಾನದ ಸ್ಥಳೀಯ ಯುವಕರು ಸ್ವಯಂ ಪ್ರೇರಿತರಾಗಿ ಗಿಡ ನೆಡುವ ಕಾಯಕ ಪ್ರಾರಂಭಿಸಿದ್ದು, ಈಗಾಗಲೇ ಸಾಸ್ತಾನ ಅಕ್ಕಪಕ್ಕದ ಹೆದ್ದಾರಿ ಪಕ್ಕದಲ್ಲಿ ಗಿಡಗಳನ್ನು ನೆಡುವ ಕಾಯಕ ಮಾಡಿ ಮುಗಿಸಿದೆ.

sapling-planting9

 ಈ ಹಿಂದೆ ಸೆಲ್ಫಿ ವಿತ್ ಗ್ರೀನ್ ಮೂಲಕ ಹೊಸ ಕ್ರಾಂತಿ ಮೂಡಿಸಿದ್ದ ಸಾಸ್ತಾನ ಮಿತ್ರ ಚಿಂತನೆಗಳು ಬಲು ವಿಶಿಷ್ಟ ಮತ್ತು ಸಮಾಜ ಮುಖಿ. ಮೊಬೈಲ್ ನೋಡುತ್ತಾ ಯುವಕರು ಹಾಳಾಗುತ್ತಿದ್ದಾರೆ ಎನ್ನುವ ಹಿರಿಯ ಮಾತನ್ನು ಸುಳ್ಳಾಗಿಸಿ ಮೊಬೈಲ್ ಮೂಲಕ ಹಸಿರು ಕ್ರಾಂತಿಗೆ ಹೊಸ ರೂಪ ಕೊಟ್ಟವರು ಸಾಸ್ತಾನ ಮಿತ್ರರು. ಆಸಕ್ತರು ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಟ್ಟು ಅದಕ್ಕೆ ರಕ್ಷಣಾ ಬೇಲಿ ನಿರ್ಮಿಸಿ, ಗಿಡದೊಂದಿಗೆ ಮೊಬೈಲ್ ಸೆಲ್ಫಿ ತೆಗೆದು ಕಳುಹಿಸಿ, ಉತ್ತಮ ಬಹುಮಾನ ನೀಡುವುದಾಗಿ ಸಾಸ್ತಾನ ಮಿತ್ರರು ವಾಟ್ಸಾಪ್ ಮೂಲಕ ಮಾಹಿತಿ ಪ್ರಚಾರ ಮಾಡಿದ್ದರು. ಇವರ ಈ ಹೊಸ ಯೋಚನೆ ಮತ್ತು ಯೋಜನೆಯಲ್ಲಿ ಸೆಲ್ಫಿಯುಗದ ಯುವ ಪಡೆ ಬಹಳಷ್ಟು ಇಷ್ಟು ಪಟ್ಟು ಸಾವಿರಾರು ಜನ ಗಿಡನೆಟ್ಟು ಸೆಲ್ಫಿ ತೆಗೆದು ಕಳುಹಿಸಿದ್ದರು. ಇಷ್ಟೆ ಅಲ್ಲದೇ ಉಡುಪಿ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಪೇಜಾವರದ ಕಿರಿಯ ಶ್ರೀಗಳು, ಕೋಟ ಪೊಲೀಸ್ ಉಪ ನಿರೀಕ್ಷಕ ಕಬ್ಬಾಳ್‍ರಾಜ್ ಮತ್ತು ಹಲವು ಗಣ್ಯ ಸಾಸ್ತಾನ ಮಿತ್ರರ ಈ ಯೋಜನೆಗೆ ಸಹಕರಿಸಿ ತಾವು ಗಿಡನೆಟ್ಟು ಸೆಲ್ಫಿ ಕಳುಹಿಸಿ ಉಳಿದವರಿಗೆ ಪ್ರೇರಣೆಯಾಗಿದ್ದರು. ಇದಲ್ಲದೇ ದೇಶದ ಪ್ರಧಾನಿ ಮೋದಿಯವರಿಗೆ ಈ ಮೇಲ್ ಮೂಲಕ ಮಾಹಿತಿ ನೀಡಿದಾಗ, ಹೊಸ ಬಗೆಯ ಆಲೋಚನೆಯನ್ನು ಶ್ಲಾಘಿಸಿ ಉತ್ತರಿಸಿದ್ದರು. ಸಾಸ್ತಾನ ಮಿತ್ರರ ಪರಿಸರ ರಕ್ಷಣೆಯ ಹೊಸ ಯೋಜನೆಯಿಂದಾಗಿ, ಒಂದು ತಿಂಗಳಗಳ ಕಾಲ ಸಾಕಷ್ಟು ಮಂದಿ ಗಿಡನೆಟ್ಟು ಸೆಲ್ಫಿ ತೆಗೆದು ಕಳುಹಿಸಿದ್ದರು.

downloads1

 ಸದ್ಯ ಇನ್ನೊಂದು ಹೊಸ ಆಲೋಚನೆ ಮಾಡಿರುವ ಸಾಸ್ತಾನ ಮಿತ್ರ ತಂಡ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಬಳಿಕ ಮರಗಳು ನಾಶವಾದ ಮೇಲೆ ಇಲ್ಲಿ ಉಷ್ಣತೆ ಹೆಚ್ಚಿರುವ ಕುರಿತು ಚಿಂತನೆ ನಡೆಸಿ, ಹಸಿರಿನ ಮೂಲಕ ವಾತಾವರಣವನ್ನು ಸಮತೋಲನಕ್ಕೆ ತರುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ. ಕಳೆದು ಕೆಲವು ವಾರಾಂತ್ಯದಲ್ಲಿ ಹೆದ್ದಾರಿ ಅಕ್ಕಪಕ್ಕದಲ್ಲಿ ಇರುವ ಸ್ಥಳಗಳಲ್ಲಿ ಸ್ವಯಂ ಪ್ರೇರಿತರಾಗಿ ಗಿಡಗಳನ್ನು ತಂದು ನೆಡುವ ಕಾಯಕ ಆರಂಭಿಸಿದ್ದಾರೆ. ಈಗಾಗಲೇ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಗಿಡಗಳನ್ನು ನೆಡುತ್ತಿದ್ದು, ಇನ್ನು ಮುಂದೆ ಪ್ರತಿ ಭಾನುವಾರವನ್ನು ಗಿಡ ನೆಡುವ ಕಾಯಕಕ್ಕೆ ಮೀಸಲಿಡುವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಪರಿಸರದ ನಾಶದಿಂದಾಗುವ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ತಂಡ ಯಾವ ಇಲಾಖೆಗೂ ಕಾಯದೆ ಸದ್ಯ ಗಿಡ ನೆಡುವ ಕಾಯಕ ನಡೆಸುತ್ತಾ ಬಂದಿದೆ. ಪ್ರತಿ ಭಾನುವಾರ ಮುಂಜಾನೆ ನಸುಕಿಗೆ ಏಳುವ ಈ ತಂಡ ಸೈಕಲ್‍ನಲ್ಲಿ ಗಿಡಗಳನ್ನು ಹಾಕಿಕೊಂಡು ಗುದ್ದಲ್ಲಿ ಹಿಡಿದು ಗಿಡ ನೆಡುವ ಕೆಲಸ ಮಾಡುತ್ತದೆ. ಈಗಾಗಲೆ ಮಾವು, ಹಲಸು, ನೇರಳೆ, ಬನ್ನೇರಳೆ, ಬೆಂಗಾ, ತೇಗ, ಹೆಬ್ಬೆಲಸು, ಚರ್ರೀ, ಮುರುಗಲು ಇತ್ಯಾದಿ ಜಾತಿಯ ಗಿಡಗಳನ್ನು ನೆಟ್ಟಿರುವ ತಂಡ ಪ್ರತಿ ಭಾನುವಾರ ಗಿಡಗಳನ್ನು ನೆಡುತ್ತಿದೆ. ಇಷ್ಟೆ ಅಲ್ಲದೇ ಸ್ಥಳೀಯರಿಗೆ ಪ್ರಕೃತಿ ನಾಶದ ಬಗ್ಗೆ ಮಾಹಿತಿ ನೀಡಿ ಪ್ರತಿಯೋರ್ವರು ಗಿಡ ನೆಡುವ ಕುರಿತು ಪ್ರೆರೇಪಿಸುತ್ತಿದ್ದಾರೆ.