ಸೌದಿ ಅರೇಬಿಯಾ: ಅನಿವಾಸಿ ಭಾರತೀಯರ ಮನಕಲಕುವ ಕತೆಗಳು

Spread the love

ಸೌದಿ ಅರೇಬಿಯಾ: ಅನಿವಾಸಿ ಭಾರತೀಯರ ಮನಕಲಕುವ ಕತೆಗಳು

ಮಂಗಳೂರು: ಸೌದಿ ಅರೇಬಿಯಾದಲ್ಲಿ ಲಾಕ್ ಡೌನ್ ಮುಂದುವರಿಯುತ್ತಿರುವಂತೆ ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರ ಮನಕಲಕುವ ಕತೆಗಳು ಹೊರಬರುತ್ತಿವೆ.

ಉಡುಪಿ ಮೂಲದ ಅಬ್ದುಲ್ ರಝಾಕ್ ಸೌದಿ ಅರೇಬಿಯಾದ ಜಿದ್ದಾದಲ್ಲಿ ತೈಲೋದ್ಯಮವನ್ನು ಆಧರಿಸಿದ ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಸುತ್ತಿರುವವರು. ಮೊದಲ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಇವರು ಇದುವರೆಗೆ ನಿಯಮಿತವಾಗಿ ಊರಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಲಾಕ್ ಡೌನ್ ನಿಂದಾಗಿ ವಿಮಾನ ಹಾರಾಟ ನಿಂತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಹೋಗಲಾಗದೆ ಸಂಕಷ್ಟ ದಲ್ಲಿದ್ದಾರೆ.

‘ಸರಕಾರ ಸೌದಿಯಲ್ಲಿ ಸಮಸ್ಯೆಗೆ ಸಿಲುಕಿದರವರನ್ನು ಕರೆದೊಯ್ಯಲು ಏರ್ಪಾಟು ಮಾಡಬಹುದೆಂಬ ನಿರೀಕ್ಷೆಯಲ್ಲಿ ನಾನಿದ್ದೇನೆ” ಎನ್ನುತ್ತಾರೆ ರಝಾಕ್.

ಬೆಂಗಳೂರಿನ ಮುಬೀನ್ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ತಮಗೆ ಉಂಟಾಗಿರುವ ಸಂಕಷ್ಟ ವನ್ನು ಅವರು ಈ ರೀತಿಯಲ್ಲಿ ವಿವರಿಸುತ್ತಾರೆ:

“ಲಾಕ್ ಡೌನ್ ನಿಂದಾಗಿ ಉಂಟಾಗಬಲ್ಲ ನಷ್ಟವನ್ನು ಕಡಿಮೆಗೊಳಿಸುವುದಕ್ಕಾಗಿ ಕಂಪೆನಿ ತಾತ್ಕಾಲಿಕ ಹುದ್ದೆಯಲ್ಲಿದ್ದ ಹಲವರನ್ನು ಕೆಲಸದಿಂದ ತೆಗೆದು ಹಾಕಿತು. ಅವರಲ್ಲಿ ನಾನು ಕೂಡ ಒಬ್ಬ. ಇತ್ತೆಚೆಗಷ್ಟೆ ನಾನು ಊರಿನಿಂದ ಹೆತ್ತವರನ್ನು ವಿಸಿಟಿಂಗ್ ವಿಸಾದಲ್ಲಿ ಕರೆಸಿಕೊಂಡಿದ್ದೆ. ಆದರೆ ಕೆಲಸ ಕಳೆದುಕೊಂಡಿರುವುದರಿಂದ ರೂಮಿನ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಮಾಲೀಕ ರೂಮ್ ಖಾಲಿ ಮಾಡುವಂತೆ ಪಟ್ಟು ಹಿಡಿದಿದ್ದಾನೆ. ಕುಟುಂಬದ ಊಟ ತಿಂಡಿಗೂ‌ ಸಾಕಷ್ಟು ಹಣ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚುತ್ತಿಲ್ಲ. ಅದೆಷ್ಟೋ ಮಂದಿ ಅನಿವಾಸಿಗಳು ಕುಟುಂಬ ಸದಸ್ಯರನ್ನು ಇಲ್ಲಿಗೆ ಕರೆಸಿ ನಂತರ ಉದ್ಯೋಗ ಕಳೆದುಕೊಂಡು ಖರ್ಚು ವೆಚ್ಚಕ್ಕಾಗಿ ಹಣವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.

ಮಂಗಳೂರು ನಿವಾಸಿ ಇಕ್ಬಾಲ್ ಎಂಬವರು ಮೂರು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾದ ದಮ್ಮಾಮ್ ಗೆ ಹೋಗಿದ್ದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅವರು ಸಂಕಷ್ಟಕ್ಕೀಡಾಗಿದ್ದಾರೆ.

“ಊರಿನಲ್ಲಿ ತೀವ್ರ ಹಣಕಾಸಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ನಾನು ಮೂರು ತಿಂಗಳ ಹಿಂದಷ್ಟೆ ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುವುದಕ್ಕಾಗಿ ಇಲ್ಲಿಗೆ ಬಂದಿದ್ದೆ. ಇಲ್ಲಿಗೆ ಬಂದು ಕೆಲವು ದಿನಗಳಾದಾಗ ಕೊರೊನಾ ಸಮಸ್ಯೆ ಆರಂಭವಾಯಿತು‌. ಲಾಕ್ ಡೌನ್ ನಿಮಿತ್ತ ಸುಮಾರು ಜ್ಯೂಸ್ ಅಂಗಡಿಯು ಮುಚ್ಚಿದೆ. ಕಂಪೆನಿಯು ನಮ್ಮ ವೇತನವನ್ನು ಅರ್ಧಕ್ಕರ್ಧ ಕಡಿತಗೊಳಿಸಿದೆ. ತವರಿಗೆ ಮರಳಲು ಇಚ್ಛಿಸುವವರನ್ನು ಮರಳಿ ಕಳಿಸಲು ಕಂಪೆನಿ ಸಿದ್ಧವಾಗಿದೆ. ನಾವು ಕೂಡ ಊರಿಗೆ ಮರಳಲು ಸಿದ್ಧರಾಗಿದ್ದೇವೆ. ಆದರೆ ವಿಮಾನ ವ್ಯವಸ್ಥೆ ನಿಲುಗಡೆಯಾಗಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ. ಸರಕಾರ ಈ ಕುರಿತು ಕಾಳಜಿ ವಹಿಸಬೇಕು” ಎನ್ನುತ್ತಾರೆ ಇಕ್ಬಾಲ್.

ಮೈಸೂರು ನಿವಾಸಿ ಮೊಹ್ಸಿನ್ ದಮ್ಮಾಮ್ ನಲ್ಲಿ ಟ್ಯಾಕ್ಸಿ ಚಾಲಕನಾಗಿ‌ ಕೆಲಸ ಮಾಡುತ್ತಿದ್ದಾರೆ. ಅವರ ಆದಾಯ ಟ್ಯಾಕ್ಸಿ‌ ಓಡಿಸುವುದರಿಂದ ದೊರೆಯುವ ಕಮಿಶನ್ ಆಧಾರದಲ್ಲಿ. ಆದರೆ ಲಾಕ್‌ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮುನ್ನೆಚರಿಕಾ ಕ್ರಮದ ಭಾಗವಾಗಿ ಟ್ಯಾಕ್ಸಿಗಳ ಓಡಿಸುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಇದರಿಂದ ಮೊಹ್ಸಿನ್ ರಂತಹ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

“ನಾವು ಕಮಿಶನ್ ಆಧಾರದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದೆವು. ಈಗ ನಾವು ಟ್ಯಾಕ್ಸಿ ಓಡಿಸುವಂತಿಲ್ಲ. ಓಡಿಸಿದರೆ 10000 ಸೌದಿ ರಿಯಾಲ್ ದಂಡ ಕಟ್ಟಬೇಕಾಗುತ್ತದೆ. ಹೀಗಾದರೆ ನಾವು ನಮ್ಮ ಮತ್ತು ತವರಿನಲ್ಲಿರುವ ನಮ್ಮ ಕುಟುಂಬದ ಖರ್ಚು ವೆಚ್ಚವನ್ನು ಹೇಗೆ ತಾನೆ ನೋಡಿಕೊಳ್ಳುವುದು” ಎಂದು ಪ್ರಶ್ನಿಸುತ್ತಾರೆ ಮೊಹ್ಸಿನ್.

ಹೆರಿಗೆಗಾಗಿ ಊರಿಗೆ ಹೊರಟು ನಿಂತಿದ್ದ ಗರ್ಭಿಣಿ ಮಹಿಳೆಯರ ಮೇಲೂ ಲಾಕ್ ಡೌನ್ ಪರಿಣಾಮ ಬೀರಿದೆ. ವಿಸಿಟ್ ವಿಸಾದಲ್ಲಿ ಕುಟುಂಬವನ್ನು ಕರೆತಂದವರಿಗೆ ಇನ್ಶೂರೆನ್ಸ್ ಇರುವುದಿಲ್ಲ. ಇಂತಹ‌ ಸಮಸ್ಯೆಯಲ್ಲಿರುವ ಅನಿವಾದಿಗಳು ಸರಕಾರದ ನೆರವಿಗಾಗಿ ಕಾಯುತ್ತಿದ್ದಾರೆ.

‘ನನ್ನ ಪತ್ಬಿಯನ್ನು ಒಂದು ವರ್ಷದ ವಿಸಿಟಿಂಗ್ ವಿಸಾದಲ್ಲಿ ಸೌದಿ ಅರೇಬಿಯಾಕ್ಕೆ ಕರೆ ತಂದಿದ್ದೆ. ಲಾಕ್ ಡೌನ್ ಮುಂದುವರಿದು ವಿಮಾನ ಹಾರಟವಿಲ್ಲದಿದ್ದರೆ ಪತ್ನಿಯನ್ನು ತವರಿಗೆ ಕಳಿಸುವುದು ಅಸಾಧ್ಯದ ಮಾತು. ಇನ್ಶೂರೆನ್ಸ್ ಇಲ್ಲದೆ ಹೆರಿಗೆಗಾಗಿ ನಾವು ದೊಡ್ಡ ಮೊತ್ತದ ಹಣವನ್ನು ನಾವು ಪಾವತಿಸಬೇಕಾಗುತ್ತದೆ. ನಾನು ಕಂಪೆನಿಯೊಂದರಲ್ಲಿ ಸಣ್ಣ ಸಂಬಳಕ್ಕೆ ದುಡಿಯುತ್ತಿರುವ ಈ ಸಂದರ್ಭದಲ್ಲಿ ಇದು ನನಗೆ ದೊಡ್ಡ ಹೊರೆಯಾಗಿದೆ” ಎನ್ನುತ್ತಾರೆ ಹೈದರಾಬಾದ್ ನ ಯೂನುಸ್.

ಲಾಕ್ ಡೌನ್ ಸೌದಿ ಅರೇಬಿಯಾದಲ್ಲಿರುವ ಉದ್ಯಮಿಗಳನ್ನೂ ಬಾಧಿಸಿದೆ‌. ಇಲ್ಲಿನ ಜುಬೈಲ್ ನಲ್ಲಿ ಅನಿವಾಸಿ ಭಾರತೀಯರ ಹೆಚ್ಚಿನ ಉದ್ಯಮಗಳು‌ ಸೌದಿ ಸರಕಾರದ ತೈಲ ಸಂಸ್ಕರಣಾ ಯೋಜನೆಗಳನ್ನು ಆಧರಿಸಿಯಾಗಿದೆ. ಸೌದಿ ಸರಕಾರವು ಸಾಮಾಜಿಕ ಅಂತರ ಕಾಪಾಡುವ ಭಾಗವಾಗಿ ಹೆ‍ಚಿನ ಯೋಜನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

“ಲಾಕ್ ಡೌನ್‌ನಿಂದಾಗಿ ತೈಲ ಸಂಸ್ಕರಣಾ ಘಟಕಗಳ ಪ್ರೊಜೆಕ್ಟ್ ಗಳು ನಿಂತಿವೆ. ಇದರಿಂದಾಗಿ ನಮ್ಮಂತಹ ಸೌದಿ ಸರಕಾರದ ತೈಲ‌ ಸಂಸ್ಕರಣಾ ಯೋಜನೆಗಳನ್ನು ಅವಲಂಬಿಸಿದ ವ್ಯಾಪಾರೋದ್ಯಮಗಳು ನಿಂತಿವೆ. ನಾವು ಸುಮಾರು‌ 1100 ಮಂದಿಯನ್ನು ವರ್ಕ್ ಪರ್ಮಿಟ್ ವೀಸಾದಲ್ಲಿ ಭಾರತದಿಂದ ತಾತ್ಕಾಲಿಕವಾಗಿ ಕರೆತಂದಿದ್ದೇವೆ. ಅವರಿಗೆ ವೇತನ ಹಾಗೂ ಊಟ, ವಸತಿ ವ್ಯವಸ್ಥೆಯನ್ನು ನೀಡಬೇಕಾಗುತ್ತದೆ. ಅಲ್ಲದೆ 1200 ಮಂದಿ ನಮ್ಮ‌ಖಾಯಂ ಸಿಬ್ಬಂದಿಗಳಿದ್ದು ಅವರಿಗೂ ವೇತನ, ಊಟ-ವಸತಿ ವ್ಯವಸ್ಥೆ ಒದಗಿಸಬೇಕಾಗುತ್ತದೆ. ಇದು ಕಂಪೆನಿಯ ಮೇಲೆ ದೊಡ್ಡ ಹೊರೆಯುಂಟುಮಾಡಲಿದ್ದು ಕೋಟ್ಯಂತರ ರೂಪಾಯಿ ನಷ್ಟವುಂಟುಮಾಡಲಿದೆ. ಸರಕಾರ ವಿಶೇಷ ವಿಮಾನ ವ್ಯವಸ್ಥೆಯನ್ನು ಮಾಡಿದಲ್ಲಿ ಅದು ಇಲ್ಲಿನ ಉದ್ಯಮಿಗಳಿಗೆ ಮತ್ತು ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗಲಿದೆ” ಎಂದರು.

ಸೌದಿ ಅರೇಬಿಯಾದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಮಾರ್ಚ್ 2ರಂದು ಪತ್ತೆಯಾಗಿತ್ತು. ಮಾರ್ಚ್ ಕೊನೆಯ ತನಕ ಅದು 1600 ಇದ್ದು, ಈಗ ಅದು 5369 ತಲುಪಿದೆ. ಕೇವಲ 15 ದಿನಗಳಲ್ಲಿ ವೈರಸ್ ಬಾಧಿತರ ಸಂಖ್ಯೆ 3769 ರಷ್ಟು ಏರಿಕೆ ಕಂಡಿತು. ಈಗಾಗಲೇ ವೈರಸ್ ಬಾಧಿತರ ಸಂಖ್ಯೆ 10000 ದಿಂದ 200000 ತನಕ ಹೆಚ್ಚಾಗಬಹುದೆಂದು ಸೌದಿ ಆರೋಗ್ಯ ಮಂತ್ರಾಲಯ ಹೇಳಿತ್ತು. ಇನ್ನಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತೂ ಸೂಚನೆ ನೀಡಿತ್ತು. ಕೋವಿಡ್ 19 ಸಮಸ್ಯೆ ಹೆಚ್ಚಿಲ್ಲಿ ಅನಿವಾಸಿಗಳು ತೀವ್ರ ಸಮಸ್ಯೆಯನ್ನು ಎದುಸಬೇಕಾದೀತು.

ವೈರಸ್ ಪೀಡಿತ ಮತ್ತು ಶಂಕಿತ ಭಾರತೀಯ ಅನಿವಾಸಿಗಾಳ ಕ್ವಾರಂಟೈನ್ ಸೌಲಭ್ಯ ಮತ್ತು ಚಿಕಿತ್ಸೆಯ ಕುರಿತು ಖಾತರಿಪಡಿಸುವಂತೆ ಭಾರತೀಯ ಸರಕಾರ ರಾಯಭಾರಿ ಕಚೇರಿಗೆ ಸೂಚಿಸಬೇಕೆಂದು ಸೌದಿ ಅರೇಬಿಯಾದ ಅನಿವಾಸಿ ಭಾರತೀಯ ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿವೆ. ಅನಿವಾಸಿ ಕಾರ್ಮಿಕರು ಒಂದೇ ಕೋಣೆಯನ್ನು ಏಳೆಂಟು ಮಂದಿ ಹಂಚಿಕೊಡು ವಾಸಿಸುತ್ತಿರುವಾಗ ಇದು ಅಗತ್ಯವೂ ಆಗಿದೆ.

“ಸಾಮಾನ್ಯವಾಗಿ ಒಂದು ಫ಼್ಲ್ಯಾಟ್ ಇದ್ದರೆ ಅವು ಗಳು ಮೂರರಿಂದ ನಾಲ್ಕರಷ್ಟು ಬೆಡ್ ರೂಮ್ ಗಳಿರುತ್ತವೆ. ಒಂದೊಂದು‌ ಕೋಣೆಯಲ್ಲಿ ಮೂರು ನಾಲ್ಕು ಬಂಕ್ ಬೆಡ್ ಗಳಿದ್ದು ಏಳೆಂಟು‌ ಮಂದಿ ಅದನ್ನು ಹಂಚಿ‌ಕೊಂಡು ಜೀವಿಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಗೆ ವೈರಸ್ ಬಾಧಿಸಿದರೂ ಅದು ವೇಗವಾಗಿ ಹರಡುವ ಸಾಧ್ಯತೆ ಇದೆ. ಹಾಗಾಗಿ ಭಾರತೀಯ ಸರಕಾರವು‌ ಅನಿವಾಸಿಗಳಿಗೆ ಉತ್ತಮ ಕ್ವಾರಂಟೈನ್‌ ವ್ಯವಸ್ಥೆ ಲಭಿಸುವ ಕುರಿತು ಖಾತರಿಪಡಿಸಿಕೊಳ್ಳಬೇಕು” ಎಂದು ಇಂಡಿಯನ್ ಸೋಶಿಯಲ್ ಫ಼ಾರಮ್ ನ ಸೌದೊ ಅರೇಬಿಯಾ ಪೂರ್ವ ಪ್ರಾಂತ್ಯದ ಅಧ್ಯಕ್ಷ ವಾಸಿಮ್ ರಬ್ಬಾನಿ ತಿಳಿಸಿದ್ದಾರೆ.

ತಾಯ್ನಾಡಿಗೆ ಮರಳಲು ಇಚ್ಚಿಸುವ ಅನಿವಾಸಿ ಭಾರತೀಯರನ್ನು ಮರಳಿ ಕರೆತರಲು ಸರಕಾರ ಏರ್ಪಾಡು ಮಾಡಬೇಕು ಎಂದು ಕೆ ಎನ್ ಆರ್ ಐ ಫ಼ಾರಮ್ ನ ಅಧ್ಯಕ್ಷ‌ ಝಕರಿಯಾ ಮುಝೈನ್ ಆಗ್ರಹಿಸಿದ್ದಾರೆ.

“ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿಗಳಿಗಾಗಿ ಸರಕಾರ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಬೇಕು. ತಾಯನಾಡಿಗೆ ಮರಳಿದ ಅನಿವಾಸಿಗಳ ಕ್ವಾರಂಟೈನ್ ಗಾಗಿ‌ ಸ್ಥಳಾವಕಾಶ ಒದಗಿಸುವುದಾಗಿ ಈಗಾಗಲೇ ಸರಕಾರೇತರ ಸಂಘಟನೆಗಳು ಹೇಳಿವೆ” ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದ ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಅನಿವಾಸಿ ಭಾರತೀಯರ ಕೊಡುಗೆ ಅಗಾಧವಾದದ್ದು.

ಪ್ರಸ್ತುತ ಲಾಕ್ ಡೌನ್ ನಿಂದ ತೊಂದರೆಯಲ್ಲಿ ಸಿಲುಕಿರುವ ಅನಿವಾಸಿಗಳು ಕೇಂದ್ರ ಸರಕಾರದ ನೆರವಿಗಾಗಿ ಮೊರೆಯಿಡುತ್ತಿದ್ದಾರೆ. ಸಮಸ್ಯೆಯು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸರಕಾರ ತುರ್ತು ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.

ವರದಿ: ಶಬೀರ್ ಕಲ್ಲಡ್ಕ


Spread the love