ಸ್ಥಳೀಯರಿಗೆ ಟೋಲ್ ರಿಯಾಯತಿ– ಯಾವುದೇ ನಿರ್ಧಾರಗಳಿಲ್ಲದೆ ಸಭೆ ಮುಂದೂಡಿಕೆ

Spread the love

ಸ್ಥಳೀಯರಿಗೆ ಟೋಲ್ ರಿಯಾಯತಿ– ಯಾವುದೇ ನಿರ್ಧಾರಗಳಿಲ್ಲದೆ ಸಭೆ ಮುಂದೂಡಿಕೆ

ಉಡುಪಿ: ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಕಡಿತಗೊಳಿಸುತ್ತಿದ್ದ ಟೋಲ್ ಶುಲ್ಕದ ಕುರಿತು ತಹಶೀಲ್ದಾರ್ ಶ್ರೀಕಾಂತ ಎಸ್ ಹೆಗಡೆ ಮತ್ತು ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಸೋಮವಾರ ಬ್ರಹ್ಮಾವರ ಮಿನಿ ವಿಧಾನಸೌಧದಲ್ಲಿ ಕರೆಯಲಾದ ಹೆದ್ದಾರಿ ಹೋರಾಟ ಸಮಿತಿಯ ಸಭೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಮುಂದೂಡಲ್ಪಟ್ಟಿದ್ದು ಟೋಲ್ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಮತ್ತೆ ಸಭೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಹಾಜರಿದ್ದ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ಯಾಮಸುಂದರ ನಾಯರಿಯವರು 2018 ರಿಂದ ಕೋಟ ಜಿಪಂ ವ್ಯಾಪ್ತಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿತ್ತು. ಈ ನಿರ್ಧಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಂಸದರು ಶಾಸಕರು ಎಲ್ಲರೂ ಕೂಡ ಜಂಟಿಯಾಗಿ ಕೈಗೊಂಡದ್ದಾಗಿದ್ದು ಈಗ ಕಂಪೆನಿ ಬದಲಾಗಿದೆ ಎಂದ ಕಾರಣ ನೀಡಿ ಮತ್ತೆ ಟೋಲ್ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಸಮಿತಿಯವರು ನಮ್ಮ ನಿರ್ಧಾರದಲ್ಲಿ ಬದ್ದರಾಗಿದ್ದು ಯಾವುದೇ ಕಾರಣಕ್ಕೂ ಟೋಲ್ ನೀಡವುದಿಲ್ಲ ಎಂದು ಸ್ಪಷ್ಟ ನಿರ್ಧಾರವನ್ನು ಟೋಲ್ ಪ್ಲಾಜಾ ಪರವಾಗಿ ಬಂದ ಅಧಿಕಾರಿಗಳ ಗಮನಕ್ಕೆ ತಂದರು.

ಟೋಲ್ ಗುತ್ತಿಗೆ ಪಡೆದುಕೊಂಡಿರುವ ಹೈವೇ ಕನ್ಸ್ಟ್ರಕ್ಶ್ಯನ್ 1 ರ ಅಧಿಕಾರಿ ಪ್ರೀತಂ ಗಂಗೂಲಿ ಭಾರತದಾದ್ಯಂತ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಸ್ಥಳೀಯರು ಟೋಲ್ಗಳಲ್ಲಿ ಪಾಸ್ನ್ನು ತಿಂಗಳೊಂದಕ್ಕೆ ರೂ.310 ಪಾವತಿಸಿ ಸಾಗಬಹುದು. ಇದು ಹೆದ್ದಾರಿ ಇಲಾಖೆಯ ನಿಯಮವಾಗಿದ್ದರಿಂದ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಮೊದಲು ಟೋಲ್ ನಿರ್ವಹಣೆ ಮಾಡುತ್ತಿದ್ದ ಕಂಪೆನಿ ಸ್ಥಳೀಯರಿಗೆ ರಿಯಾಯತಿ ನೀಡುತ್ತಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲಅಲ್ಲದೆ ನಮ್ಮದು ಹೊಸ ಕಂಪೆನಿಯಾಗಿದ್ದು ಸ್ಥಳೀಯರಿಗೆ ಶುಲ್ಕ ರಿಯಾಯತಿ ನೀಡಲು ಸಾಧ್ಯವೇ ಇಲ್ಲ. ಅಲ್ಲದೇ ನಮ್ಮ ಕಂಪೆನಿ ಶುಲ್ಕ ಪಡೆದರೂ ಸಹ ವಾಹನ ಸವಾರರಿಗೆ ವಿದೇಶಿ ಮಾದರಿಯ ಉತ್ತಮ ದರ್ಜೆಯ ರಸ್ತೆಗಳನ್ನು ನೀಡುತ್ತಿದ್ದೇವೆ ಆದ್ದರಿಂದ ಶುಲ್ಕ ರಿಯಾಯತಿಗೆ ಅವಕಾಶವಿಲ್ಲ. ಅದರ ಬಳಿಕವೂ ಶುಲ್ಕ ರಿಯಾಯತಿ ಬಗ್ಗೆ ಸ್ಪಷ್ಟ ನಿರ್ಧಾರ ನಮ್ಮ ಹಂತದ ಅಧಿಕಾರಿಗಳು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದರು.

ಇದಕ್ಕೆ ಒಪ್ಪದ ಹೋರಾಟ ಸಮಿತಿಯ ಪದಾಧಿಕಾರಿಗಳು ನಮಗೆ ಇಂತಹ ಕಾರಣಗಳಿಂದ ಸಮಾಧಾನವಾಗುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಸ್ಥಳೀಯ ವಾಹನ ಸವಾರರು ಟೋಲ್ ನೀಡಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಪ್ರತಿನಿಧಿಗಳು ಮುಂದಿನ ಒಂದೆರಡು ದಿನಗಳಲ್ಲಿ ನಮ್ಮ ಸಂಸ್ಥೆಯ ಉನ್ನತ ಅಧಿಕಾರಿಗಳನ್ನು ಕರೆಸಿ ಮತ್ತೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.

ಅಧಿಕಾರಿಗಳಿಂದ ಸಮಂಜಸ ಉತ್ತರ ದೊರಕದ ಕಾರಣ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ರೊಂದಿಗೆ ಮಾತುಕತೆ ನಡೆಸಿ ಮತ್ತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಎಂದು ಸಭೆಯನ್ನು  ಮುಂದೂಡಲಾಯಿತು.

ಇದೇ ವೇಳೆ ಮಾತನಾಡಿದ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರು ಮುಂದಿನ ಸಭೆಯಲ್ಲಿ ಉನ್ನತ ಅಧಿಕಾರಿಯನ್ನು ಕರೆ ತಂದು ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಒದಗಿಸಬೇಕು ಅಲ್ಲಿಯ ತನಕ ಸ್ಥಳೀಯ ವಾಹನಗಳಿಂದ ಯಾವುದೇ ಕಾರಣಕ್ಕೂ ಸಹ ಟೋಲ್ ಸಂಗ್ರಹಿಸ ಬಾರದ ಎಂದು ಟೋಲ್ ಪ್ರತಿನಿಧಿಗಳು ಎಚ್ಚರಿಕೆ ನೀಡಿ ಸಭೆಯನ್ನು ಮುಂದೂಡಿದರು.

ಸಭೆಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ವಿಠಲ ಪೂಜಾರಿ, ಆಲ್ವಿನ್ ಅಂದ್ರಾದೆ, ಪ್ರತಾಪ್ ಶೆಟ್ಟಿ, ನಾಗರಾಜ್ ಗಾಣಿಗ ಹಾಗೂ ಇತರರು ಉಪಸ್ಥೀತರಿದ್ದರು.


Spread the love