ಸ್ವಚ್ಛತೆ ಕಾಪಾಡಿ- ರೋಗಗಳಿಂದ ಮುಕ್ತರಾಗಿ: ಮೀನಾಕ್ಷಿ ಮಾಧವ ಬನ್ನಂಜೆ

Spread the love

ಸ್ವಚ್ಛತೆ ಕಾಪಾಡಿ- ರೋಗಗಳಿಂದ ಮುಕ್ತರಾಗಿ: ಮೀನಾಕ್ಷಿ ಮಾಧವ ಬನ್ನಂಜೆ

ಉಡುಪಿ: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಮತ್ತು ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡುವ ಮೂಲಕ ವಿವಿಧ ರೋಗಗಳಿಂದ ಮುಕ್ತರಾಗುವಂತೆ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದ್ದಾರೆ.

ಅವರು ಸೋಮವಾರ , ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ, ರೋಟರಿ ಉಡುಪಿ, ಲಯನ್ಸ್ ಉಡುಪಿ ಇವರ ಸಹಯೋಗದಲ್ಲಿ, ಪಡು ನಿಟ್ಟೂರಿನ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಳೆಗಾಲದಲ್ಲಿ ಉಂಟಾಗುವ ಕೊಳಚೆ ಮತ್ತು ನಿಂತ ನೀರಿನಿಂದ ನೊಣಗಳು ಉತ್ಪತ್ತಿಯಾಗಲಿದ್ದು ಇದರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿ ಕಂಡು ಬರುತ್ತದೆ ಆದ್ದರಿಂದ ಮನೆಯ ಆವರಣದಲ್ಲಿ ಮತ್ತು ಮನೆಯ ಒಳಗೆ ಸ್ವಚ್ಛತೆ ಕಾಪಾಡುವಂತೆ, ಬಯಲು ಶೌಚಾಲಯ ಬಳಕೆ ಮಾಡದಂತೆ ಹಾಗೂ ನಗರಸಭೆಯಿಂದ ಸಂಗ್ರಹಿಸುವ ಕಸದಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವಂತೆ ತಿಳಿಸಿದ ನಗರಸಭೆಯ ಅಧ್ಯಕ್ಷರು , ತ್ಯಾಜ್ಯವನ್ನು ಎಲ್ಲೆಡೆ ಬಿಸಾಡುವುದರಿಂದ ಕೊಳೆತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಬರಲಿವೆ ಈ ಬಗ್ಗೆ ನಾಗರೀಕರು ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಮಾತನಾಡಿ, ಜಿಲ್ಲೆಯಲ್ಲಿ 0-5 ವರ್ಷದೊಳಗಿನ 78000 ಮನೆಗಳನ್ನು ಗುರುತಿಸಲಾಗಿದ್ದು, ಜೂನ್ 12 ರಿಂದ 24 ರ ವರೆಗೆ ನಡೆಯುವ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ, ಈ ಎಲ್ಲಾ ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಓಆರ್ ಎಸ್ ಪಾಕೆಟ್ ವಿತರಿಸಲಿದ್ದಾರೆ , ಭೇಟಿ ಸಂದರ್ಭದಲ್ಲಿ ಮನೆಯಲ್ಲಿ ಭೇಧಿಯಿಂದ ನರಳುತ್ತಿರುವ ಮಕ್ಕಳು ಕಂಡುಬಂದಲ್ಲಿ ಜಿಂಕ್ ಮಾತ್ರೆಯನ್ನು ವಿತರಿಸಲಿದ್ದಾರೆ , ಮಳೆಗಾಲದಲ್ಲಿ ಮಕ್ಕಳಲ್ಲಿ ಭೇದಿ ಪ್ರಕರಣಗಳು ಜಾಸ್ತಿ ಕಂಡುಬರಲಿದ್ದು, ಮನೆಯ ಸುತ್ತಮುತ್ತ ನೊಣಗಳು ಉತ್ಪತ್ತಿಯಾಗದಂತೆ ಸ್ವಚ್ಚತೆ ಕಾಪಾಡುವಂತೆ ತಿಳಿಸಿದ ಅವರು, ಮನೆಯ ಸುತ್ತಮುತ್ತ ನೀರಿ ಶೇಖರಣೆ ಆಗದಂತೆ ಜಾಗೃತಿ ವಹಿಸಿ ಇದರಿಂದ ಸೊಳ್ಳೆಗಳ ಬೆಳವಣಿಗೆಯಾಗಿ ಡೆಂಗ್ಯೂ ಕಂಡುಬರಬಹುದು , ಸ್ವಚ್ಛತೆಯ ಬಗ್ಗೆ ಮತ್ತು ಕೈ ತೊಳೆಯುವ ವಿಧಾನ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಡಾ. ರೋಹಿಣಿ ತಿಳಿಸಿದರು.

ಓಆರ್ ಎಸ್ ದ್ರಾವಣ ತಯಾರಿಸುವ ಬಗ್ಗೆ ಮತ್ತು ಕೈ ತೊಳೆಯುವ ವಿಧಾನದ ಬಗ್ಗೆ ಡಾ. ಈಶ್ವರಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯೆ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ರೋಟರಿಯ ಅಧ್ಯಕ್ಷ ಡಾ.ಸುರೇಶ್ ಶೆಣ್ಯೆ, ಆರ್.ಸಿ.ಹೆಚ್. ಅಧಿಕಾರಿ ಡಾ. ರಾಮ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ , ಡಾ. ದೀಕ್ಷಾ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.


Spread the love