ಹೆಮ್ಮಾಡಿ: ಕದ್ದ ಹುಂಡಿ ಹಣ ಶಾಲೆಯಲ್ಲಿಟ್ಟು ಹೋದ ಕಳ್ಳ!
ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಕಳ್ಳತನ ಪ್ರಕರಣ
ಕುಂದಾಪುರ: ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನ ನಡೆಸಿ ಹುಂಡಿ ಹಣ ಕದ್ದೊಯ್ದ ಕಳ್ಳ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಇಟ್ಟು ಹೋದ ಘಟನೆ ಸೋಮವಾರ ಸಂಜೆ ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ ಹೆಮ್ಮಾಡಿನ ಪ್ರಾಥಮಿಕ ಶಾಲೆಯ ವರಾಂಡದ ಜಗುಲಿಯ ಮೇಲೆ ಹಸಿರು ಚೀಲ ಇದ್ದುದನ್ನು ಗಮನಿಸಿದ್ದ ಶಿಕ್ಷಕರು ಅಷ್ಟೇನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಭಾನುವಾರ ಶಾಲೆಗೆ ರಜೆ ಇದ್ದು, ಸೋಮವಾರವೂ ಅದೇ ಸ್ಥಳದಲ್ಲಿದ್ದ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಹಸಿರು ಚೀಲವನ್ನು ಬಿಡಿಸಿ ನೋಡಿದಾಗ ಹಣ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಮುಖ್ಯೋಪಾಧ್ಯಾಯರು ದೇವಸ್ಥಾನದ ಆಡಳಿತ ಮಂಡಳಿಗೆ ಸುದ್ದಿ ಮುಟ್ಟಿಸಿದ್ದು, ಆಡಳಿತ ಮಂಡಳಿಯವರು ಕುಂದಾಪುರ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕುಂದಾಪುರ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಜೀರ್ಣೊದ್ದಾರಗೊಂಡಿದ್ದ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಶುಕ್ರವಾರ ತಡರಾತ್ರಿ ಬಾಗಿಲ ಚಿಲಕದ ಸ್ಕ್ರೂ ತೆಗೆದು ಒಳ ನುಗ್ಗಿದ ಕಳ್ಳ ಹುಂಡಿ ಹಣ ಹಾಗೂ ತಿಂಗಳ ಸತ್ಯನಾರಾಯಣ ಪೂಜೆಗಾಗಿ ಸೇವಾರ್ಥಿಗಳಿಂದ ಸಂಗ್ರಹಿಸಿದ ಹಣ ಕದ್ದು ಪರಾರಿಯಾಗಿದ್ದನು. ಶನಿವಾರ ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆರೆಯಲು ಬಂದ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.
ಸರಣಿ ಕಳ್ಳತನ:
ದೇವಸ್ಥಾನವಲ್ಲದೇ ಅದೇ ದಿನ ಸಮೀಪದ ಮೂರು ಮನೆಗಳಿಗೆ ನುಗ್ಗಿದ್ದ ಕಳ್ಳ ಅಲ್ಪಸ್ವಲ್ಪ ಹಣ ದೋಚಿ ನಸುಕಿನಜಾವ 4 ಗಂಟೆಯ ಆಸುಪಾಸಿಗೆ ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯಾವಳಿಯೂ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮೂರು ಮನೆಯವರು ಮನೆಯಲ್ಲಿಲ್ಲದ ಕಾರಣ ಕಳ್ಳತನ ಪ್ರಕರಣ ಶನಿವಾರ ಮಧ್ಯಾಹ್ನದ ವೇಳೆ ಬೆಳಕಿಗೆ ಬಂದಿತ್ತು.
ಕಳ್ಳನ ಚಲನವಲನ ದೇವಸ್ಥಾನದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕುಂದಾಪುರ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.













