ಅಂತರ್ ರಾಜ್ಯ ಕುಖ್ಯಾತ ವಾಹನ ಕಳ್ಳ ಬಂಧನ — ಪಿಕಪ್ ಹಾಗೂ ಬೈಕ್ ವಶಕ್ಕೆ
ಮಂಗಳೂರು: ಸುರತ್ಕಲ್ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಎರಡು ವಾಹನ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಕೇರಳ ಮೂಲದ ಕುಖ್ಯಾತ ಅಂತರ್ರಾಜ್ಯ ವಾಹನ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಲಾದ ಪಿಕಪ್ ವಾಹನ ಹಾಗೂ ಬೈಕ್ವನ್ನು ವಶಪಡಿಸಿಕೊಳ್ಳಲಾಗಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಪ್ರದೇಶದಲ್ಲಿ ಸುಕುಮಾರ್ ಅವರ ಮನೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ KA-19-AE-8017 ನಂಬರ್ನ ಪಿಕಪ್ ವಾಹನವನ್ನು ಸೆಪ್ಟೆಂಬರ್ 30ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಅಕ್ಟೋಬರ್ 3ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ನಂ.126/2025) ದಾಖಲಾಯಿತು.
ತನಿಖೆ ಮುಂದುವರಿಸುತ್ತಿದ್ದ ವೇಳೆ, ಅಕ್ಟೋಬರ್ 7ರಂದು ಬೈಕ್ನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಚಾರಣೆ ವೇಳೆ ಆತ ಚಲಾಯಿಸುತ್ತಿದ್ದ ಬೈಕ್ಗೆ ಯಾವುದೇ ದಾಖಲೆಗಳಿರದ ಕಾರಣ ತನಿಖೆ ನಡೆಸಿದಾಗ, ಆ ಬೈಕ್ನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಾರಂ ಮಾಲ್ ಬಳಿಯಿಂದ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ — ಹಂಝ ಕುಪ್ಪಿಕಂಡ ಅಲಿಯಾಸ್ ಹಂಸ ಅಲಿಯಾಸ್ ಹಂಝ ಪೊನ್ನನ್ (29), ತಂದೆ ಶಾಜಿ ಅಲಿಯಾಸ್ ಶಾಫಿ, ನಿವಾಸಿ ವಯಲಿಲ್ ವೀಡು, ವೆಟ್ಟೂರ್ ಪೋಸ್ಟ್, ರಾತಿಕ್ಕಲ್, ವರ್ಕಳಾ ಗ್ರಾಮ, ತಿರುವನಂತಪುರಂ ಜಿಲ್ಲೆ, ಕೇರಳ ರಾಜ್ಯ.
ತನಿಖೆಯಲ್ಲಿ ಆರೋಪಿ ಸುರತ್ಕಲ್ ಪ್ರದೇಶದಿಂದ ಕಳವು ಮಾಡಿದ ಪಿಕಪ್ ವಾಹನ ಹಾಗೂ ಮಂಗಳೂರು ದಕ್ಷಿಣ ಪ್ರದೇಶದಿಂದ ಕಳವು ಮಾಡಿದ ಬೈಕ್ ಎರಡೂ ಈತನಿಂದ ಕಳ್ಳತನ ಮಾಡಲ್ಪಟ್ಟಿವೆ ಎಂಬುದು ಬಹಿರಂಗವಾಗಿದೆ. ಪೊಲೀಸರು ಸುಮಾರು ರೂ.3.10 ಲಕ್ಷ ಮೌಲ್ಯದ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಹಂಝ ಕುಪ್ಪಿಕಂಡ ವಿರುದ್ಧ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿವೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಸುರತ್ಕಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಶಶಿಧರ ಶೆಟ್ಟಿ, ಎಎಸ್ಐ ರಾಜೇಶ್ ಆಳ್ವ, ಹಾಗೂ ಸಿಬ್ಬಂದಿಗಳಾದ ಉಮೇಶ್, ವಿನೋದ್ ಕುಮಾರ್, ನಾಗರಾಜ್ ಮತ್ತು ಸುನೀಲ್ ಕುಮಾರ್ ಯಶಸ್ವಿಯಾಗಿ ನಡೆಸಿದ್ದಾರೆ.