ಅಕ್ರಮ ಕೋಳಿ ಅಂಕ ಜೂಜಾಟದ ಮೇಲೆ ಪೊಲೀಸರ ದಾಳಿ; ಇಬ್ಬರ ಬಂಧನ
ವಿಟ್ಲ: ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ನಾಲ್ಕು ಕೋಳಿಗಳು, ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇ 30ರಂದು ರಾತ್ರಿ ಅಕ್ರಮ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಪುಣಚ ಗ್ರಾಮದ ಪೆರಿಯಾಲ್ತಡ್ಕ ಪ್ರದೇಶಕ್ಕೆ ದಾಳಿ ನಡೆಸಿದರು.
ಈ ವೇಳೆ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ಜೂಜಾಟ ನಡೆಸುತ್ತಿರುವುದು ಪತ್ತೆಯಾಯಿತು. ಸ್ಥಳದಲ್ಲಿದ್ದ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ನಿವಾಸಿಗಳಾದ ದಿವಾಕರ ಪೂಜಾರಿ (46) ಹಾಗೂ ಯಶ್ವಂತ್ (34) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಳಿಯ ಸಂದರ್ಭದಲ್ಲಿ 4 ಅಂಕದ ಕೋಳಿಗಳು, ರೂ. 4,145 ನಗದು, ಕೋಳಿ ಅಂಕಕ್ಕೆ ಬಳಸುತ್ತಿದ್ದ ಕತ್ತಿ (ಬಾಳು) ಸೇರಿದಂತೆ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 119/2026 ದಾಖಲಿಸಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 87 ಮತ್ತು 93, ಪ್ರಿವೆನ್ಷನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಕಾಯ್ದೆ 1960ರ ಕಲಂ 3 ಮತ್ತು 11 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 112ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.













