‘ಅಪ್ಪನ ಮುಖ ನೋಡಿ ಮಗನಿಗೆ ಹೆಣ್ಣು ಕೊಡದಿರಿ – ಪ್ರಮೋದ್ ಮಧ್ವರಾಜ್

Spread the love

‘ಅಪ್ಪನ ಮುಖ ನೋಡಿ ಮಗನಿಗೆ ಹೆಣ್ಣು ಕೊಡದಿರಿ – ಪ್ರಮೋದ್ ಮಧ್ವರಾಜ್

ಚಿಕ್ಕಮಗಳೂರು: ‘ಜಿಲ್ಲೆಯಲ್ಲಿನ ಅರಣ್ಯ ಒತ್ತುವರಿಯಂತಹ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ’ ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್–ಜೆಡಿಎಸ್– ಸಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಕಸ್ತೂರಿರಂಗನ್ ವರದಿ ಜಾರಿಯಾದರೆ ಮಲೆನಾಡು ಭಾಗದ ಜನರ ಅಭಿವೃದ್ಧಿ ಕುಂಠಿತವಾಗುತ್ತದೆ. ಬುಡಕಟ್ಟು ಜನರನ್ನು ಅರಣ್ಯದಿಂದ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅರಣ್ಯವಾಸಿಗಳ ಪರವಾಗಿ ಸಂಸತ್ನಲ್ಲಿ ಧ್ವನಿ ಎತ್ತುತ್ತೇನೆ. ಕಾಫಿ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದರು.

‘ನಾನು ಸಂಸದನಾಗಿ ಆಯ್ಕೆಯಾದರೆ ಚಿಕ್ಕಮಗಳೂರಿನಲ್ಲಿ ಮನೆ ಮಾಡುತ್ತೇನೆ. ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಹೆಚ್ಚು ಅನುದಾನ ತರುತ್ತೇನೆ. ನಗರಸಭೆ ಸದಸ್ಯನ ರೀತಿಯಲ್ಲಿ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತೇನೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ನೀಡುವಂತೆ ಬಿಜೆಪಿ ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ. ಅದು ಅಪ್ಪನ ಮುಖ ನೋಡಿ ಮಗನಿಗೆ ಹೆಣ್ಣು ನೀಡುವಂತೆ ಕೇಳಿದಂತಿದೆ. ಮೋದಿಗೆ ಮತ ಕೇಳುವವರು ವಾರಣಾಸಿಗೆ ಹೋಗಲಿ. ಅವರಿಗೆ ರೈಲ್ವೇ ಟಿಕೆಟ್ ಕೊಡಿಸುತ್ತೇನೆ’ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ ಒಳಗೊಂಡಂತೆ ವಿವಿಧ ಯೋಜನೆಗಳ ಮೂಲಕ ಒಂದು ಕುಟುಂಬಕ್ಕೆ ₹1.5 ಲಕ್ಷದ ಸೌಲಭ್ಯ ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ₹44 ಸಾವಿರ ಕೋಟಿ ಸಾಲವನ್ನು ಹಂತ ಹಂತವಾಗಿ ಮನ್ನಾ ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ₹10 ಸಾವಿರ ಸಾಲ ನೀಡುವ ಯೋಜನೆ ಜಾರಿಗೊಳಿಸಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಿದ್ದಾರೆ’ ಎಂದರು.

‘ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನೀಡಿದ ಒಂದು ಭರವಸೆಯನ್ನು ನರೇಂದ್ರ ಮೋದಿ ಅವರು ಈಡೇರಿಸಿಲ್ಲ. ಜನರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮೆ ಮಾಡಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸಿಲ್ಲ. ಕಪ್ಪುಹಣ ವಾಪಾಸ್ ತರಲಿಲ್ಲ’ ಎಂದು ದೂರಿದರು.

ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ‘ಮೋದಿ ಸೋಲಿಸುವುದು ಸಿಪಿಐ ಉದ್ದೇಶವಾಗಿದೆ. ಅದಕ್ಕಾಗಿ ಗೆಲ್ಲುವ ಅಭ್ಯರ್ಥಿಗೆ ಬೆಂಬಲ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ದೇಶದಲ್ಲಿ ಭಯೋತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿದೆ. ಬಿಜೆಪಿಯವರು ಧರ್ಮದ ಹೆಸರಿನಲ್ಲಿ ದೇಶ ವಿಭಜಿಸುವ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಹತ್ತಿಕ್ಕಲು ಎಲ್ಲರೂ ಒಗ್ಗೂಡಬೇಕು’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಮಹಮದ್ ಮಾತನಾಡಿ, ‘ಮೈತ್ರಿ ಪಕ್ಷಗಳ ಪ್ರಮುಖ ಮುಖಂಡರು ಜಿಲ್ಲೆಯಲ್ಲಿ ಪ್ರಚಾರ ನಡೆಸಬೇಕು. ಕಾರ್ಯಕರ್ತರಿಗೆ ಉತ್ಸಾಹ ತುಂಬಬೇಕು. ಪ್ರತಿ ಮತಗಟ್ಟೆಯಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಭೆ ನಡೆಸಬೇಕು. ಗೋ ಬ್ಯಾಕ್ ಶೋಭಕ್ಕ ಆಂದೋಲನದ ಅನುಕೂಲ ಪಡೆದುಕೊಳ್ಳಬೇಕು’ ಎಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ವಿದರ್ಭ ಯೋಜನೆ ಮೂಲಕ ಕಾಫಿ ಬೆಳೆಗಾರರಿಗೆ ಆರ್ಥಿಕ ನೆರವು ನೀಡಿದ್ದರು. ಕಾಫಿ ಬೆಳೆಗಾರರು ಅದನ್ನು ಸ್ಮರಿಸಬೇಕು. ಮೈತ್ರಿ ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಮುಖಂಡ ಸಗೀರ್ ಅಹಮದ್ ಮಾತನಾಡಿ, ಬಹಿರಂಗ ಸಭೆಗಳನ್ನು ನಿಲ್ಲಿಸಬೇಕು. ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸಬೇಕು. ಭಿತ್ತಿಪತ್ರಗಳಲ್ಲಿ ಮೈತ್ರಿ ಪಕ್ಷಗಳ ಮುಖಂಡರ ಭಾವಚಿತ್ರ ಮುದ್ರಿಸಬೇಕು ಎಂದು ಅಭ್ಯರ್ಥಿಗೆ ಸಲಹೆ ನೀಡಿದರು.

ಮುಖಂಡರಾದ ರೂಬೆನ್ ಮೊಸೆಸ್, ಹಿರೇಮಗಳೂರು ರಾಮಚಂದ್ರ, ರೇಖಾ ಹುಲಿಯಪ್ಪಗೌಡ, ಸುರೇಖಾ ಸಂಪತ್, ಜಿ.ರಘು, ವಿಜಯಕುಮಾರ್, ಹೂವಪ್ಪ ಇದ್ದರು.

5 ವರ್ಷ ಕ್ಷೇತ್ರದ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಕೆಲಸ ಕೊಡುತ್ತೀರಾ?
ಕಳಸ: ‘ನಮ್ಮ ಯಾವುದೇ ಉದ್ಯೋಗ, ವ್ಯವಹಾರದಲ್ಲಿ 1 ತಿಂಗಳು ಸರಿಯಾಗಿ ಕೆಲಸ ಮಾಡದವರನ್ನು ನಾವು ಕೆಲಸದಿಂದ ತೆಗೆಯುತ್ತೇವೆ. ಹೀಗಿರುವಾಗ ಕಳೆದ 5 ವರ್ಷ ಕ್ಷೇತ್ರದ ಯಾವುದೇ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರಿಗೆ ಇಲ್ಲಿ ಮತ್ತೆ ಕೆಲಸ ಕೊಡುತ್ತೀರಾ’ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದರು.

ಪಟ್ಟಣದಲ್ಲಿ ಗುರುವಾರ ಜೆಡಿಎಸ್, ಕಾಂಗ್ರೆಸ್ ಮತ್ತು ಸಿಪಿಐ ಜಂಟಿಯಾಗಿ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಶೋಭಾ ಅವರು ಲೋಕಸಭಾ ಟಿಕೆಟ್ಗಾಗಿ ಯಡಿಯೂರಪ್ಪ ಅವರನ್ನು ಆಧರಿಸಿದರೆ ಮತಕ್ಕಾಗಿ ಮೋದಿ ಅವರ ಹೆಸರು ನಂಬಿದ್ದಾರೆ. ಸ್ವಂತಿಕೆ ಇಲ್ಲದೆ ಕ್ಷೇತ್ರದ ಜ್ವಲಂತ ಸಮಸ್ಯೆಗಳಾದ ಒತ್ತುವರಿ, ಕಸ್ತೂರಿರಂಗನ್ ವರದಿ, ಗೋರಖ್ಸಿಂಗ್ ವರದಿ, ಕಾಫಿ, ಅಡಿಕೆ, ಕಾಳುಮೆಣಸಿನ ಸಮಸ್ಯೆಗಳನ್ನು ಮರೆತು ಕೋಮುವಾದ ಹರಡುವಲ್ಲಿ ಮಾತ್ರ ನಿಸ್ಸೀಮರಾಗಿರುವ ಶೋಭಾ ಅವರು ಮತ್ತೆ ನಿಮ್ಮ ಸಂಸದರಾಗಬೇಕೇ’ ಎಂದು ಪ್ರಮೋದ್ ಮತ್ತೆ ಪ್ರಶ್ನಿಸಿದರು.

ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ‘ಹಿಂದೂ ರಾಷ್ಟ್ರದ ಕಲ್ಪನೆ ಮೂಲಕ ದೇಶ ಒಡೆಯುವ ವಿಚ್ಛಿದ್ರಕಾರಿ ಶಕ್ತಿಯಾದ ಬಿಜೆಪಿಯನ್ನು ಮಣ್ಣುಮುಕ್ಕಿಸಲು ಈ ಬಾರಿ ಕಾಂಗ್ರೆಸ್- ಜೆಡಿಎಸ್ ಒಂದಾಗಿವೆ. ಕಂದಾಯ, ಅರಣ್ಯ ಭೂಮಿಯ ಒತ್ತುವರಿ ಸಮಸ್ಯೆ ಈ ಬಾರಿ ಬಗೆಹರಿಯಲಿವೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಜ್ವಾಲನಯ್ಯ ಮಾತನಾಡಿ, ‘ಮೂಡಿಗೆರೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಮುನ್ನಡೆ ಖಚಿತ’ ಎಂದರು.

ಮಂಜಪ್ಪಯ್ಯ ಮಾತನಾಡಿ, ‘ಜೆಡಿಎಸ್ ಕಾಂಗ್ರೆಸ್ ನಡುವೆ ಗೊಂದಲ ಇಲ್ಲ. ಖಂಡಿತವಾಗಿ ಉತ್ತಮ ಫಲಿತಾಂಶ ನೀಡುತ್ತೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಭಾಕರ್ ಮಾತನಾಡಿ, ‘ಸಂಸದರ ನಿಧಿಯಿಂದ ಕಳಸ ಹೋಬಳಿಗೆ ಒಂದು ರೂಪಾಯಿಯನ್ನೂ ನೀಡದೆ 5 ವರ್ಷ ನಾಪತ್ತೆಯಾಗಿದ್ದ ಶೋಭಾ ಈಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ‘ಜನರ ಸಮಸ್ಯೆ ಆಲಿಸದ, ಕ್ಷೇತ್ರದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತದ ಶೋಭಾ ಅವರನ್ನು ಜನರೇ ಮನೆಗೆ ಕಳಿಸುತ್ತಾರೆ’ ಎಂದರು.

ಮುಖಂಡರಾದ ಶ್ರೀನಿವಾಸ ಹೆಬ್ಬಾರ್, ರಫೀಕ್, ಬಿ.ಎಲ್.ರಾಮದಾಸ್, ನಯನಾ ಮೋಟಮ್ಮ, ಗೋಪಾಲ ಶೆಟ್ಟಿ, ಶಿವಾನಂದ ಸ್ವಾಮಿ, ಹೂವಪ್ಪ, ಎಂ.ಬಿ.ಸಂತೋಷ್, ಹಿತ್ತಲಮಕ್ಕಿ ರಾಜೇಂದ್ರ, ವೀರೇಂದ್ರ, ಸುಜಿತ್, ರತಿ ರವೀಂದ್ರ, ಕಲ್ಮನೆ ಮಹೇಂದ್ರ ಭಾಗವಹಿಸಿದ್ದರು.


Spread the love