ಅಭಿನಯ ವೇಳೆ ಕುಸಿದು ಬಿದ್ದ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ನಿಧನ

Spread the love

ಅಭಿನಯ ವೇಳೆ ಕುಸಿದು ಬಿದ್ದ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ನಿಧನ

ಮಂಗಳೂರು: ಕಟೀಲು ಮೂರನೇ ಮೇಳದ ಪ್ರಸಿದ್ಧ ಹಿರಿಯ ಕಲಾವಿದ, ಮೆನೇಜರ್ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರು ಬುಧವಾರ ರಾತ್ರಿ ಎಕ್ಕಾರು ಹತ್ತು ಸಮಸ್ತರ ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿನ ಅರುಣಾಸುರನ ಪಾತ್ರ ಅಭಿನಯ ವೇಳೆ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಿಸಿದಾದರೂ ಚೇತರಿಸಿಕೊಳ್ಳದೆ ಗುರುವಾರ ಬೆಳಗಿನಜಾವ ನಿಧನರಾದರು.

ನಿನ್ನೆ ಕಟೀಲು ಸಮೀಪದ ಎಕ್ಕಾರಿನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನವಿತ್ತು. ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರದಲ್ಲಿದ್ದರು. ಮುಂಜಾನೆ ದುಂಭಿಯನ್ನು ಕೊಲ್ಲಲು ಬಂಡೆಯನ್ನು ಕಡಿಯುವ ಸನ್ನಿವೇಶ ಬಂದಾಗ ಶೆಟ್ಟರು ರಂಗಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರ ಸಲಹೆಯಂತೆ, ಡಾ.ಪದ್ಮನಾಭ ಕಾಮತ ಅವರನ್ನು ಸಂಪರ್ಕಿಸಿ, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿಯಲ್ಲೇ ಮೃತಪಟ್ಟರೆಂದು ಡಾ.ಪದ್ಮನಾಭ ಕಾಮತರು ತಿಳಿಸಿದ್ದಾರೆ.

ನಿನ್ನೆಯ ಅರುಣಾಸುರನ ಪಾತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿದ್ದರು ಎಂದು ಪ್ರೇಕ್ಷಕರು ಹಾಗೂ ಮೇಳದ ಕಲಾವಿದರು ತಿಳಿಸಿದ್ದಾರೆ. ಕೊನೆಯ ಎರಡು ಪದ್ಯಗಳಲ್ಲಿ ವಿಶೇಷವಾಗಿ ಅಭಿನಯ ನೀಡಿದ್ದರು.

ಪತ್ನಿ, ಸುಪುತ್ರರಾದ ಶಶಿಕಾಂತ, ಮುಕೇಶ್ ಹಾಗೂ ಶ್ರೀನಿಧಿ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಶೆಟ್ಟರು ಹೊಂದಿದ್ದರು.


Spread the love