ಅಯೋಧ್ಯೆ ತೀರ್ಪು; ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಹಕರಿಸಿ – ಎಸ್ಪಿ ನೀಶಾ ಜೇಮ್ಸ್
ಉಡುಪಿ: ವಿವಾದಿತ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿಯ ಕುರಿತ ತೀರ್ಪನ್ನು ಸರ್ವೋಚ್ಚ ನ್ಯಾಯಲಯವು ಶನಿವಾರ ಪ್ರಕಟಿಸಲಿರುವ ಹಿನ್ನಲೆಯಲ್ಲಿ ಎಲ್ಲಾ ಧರ್ಮಗಳು, ಸಾರ್ವಜನಿಕರು ಶಾಂತ ರೀತಿಯಲ್ಲಿದ್ದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಹಕರಿಸಬೇಕಾಗಿ ಉಡುಪಿ ಜಿಲ್ಲಾ ಪೊಲೀಸ್ ವಿನಂತಿಸಿದ್ದು, ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಎಸ್ಪಿ ನೀಶಾ ಜೇಮ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸ್ಥಳೀಯ ಮಾಹಿತಿಯನ್ನು ಆಕ್ಷೇಪಾರ್ಹ, ವಿವಾದಿತ, ಪ್ರಚೋದನಾಕಾರಿ ಪೋಸ್ಟ್ ಗಳು, ಕಾಮೆಂಟ್ ಗಳು ಯಾ ಮಾಹಿತಿಗಳನ್ನು ಪ್ರಸಾರ ಮಾಡಬಾರದು/ರವಾನಿಸಬಾರದು.
ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಆಕ್ಷೇಪಾರ್ಹ ಮಾಹಿತಿ, ಪೋಸ್ಟ್ ಗಳ ಮೇಲೆ ನಿಗಾವಹಿಸಲಾಗುವುದು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಇಂತಹ ಯಾವುದಾದರೂ ಆಕ್ಷೇಪಾರ್ಹ, ಕಾನೂನು ಬಾಹಿರ ಪ್ರಚೋದನಾಕಾರಿ ಪೋಸ್ಟ್ ಗಳು, ಮಾಹಿತಿಗಳು ತಮ್ಮ ಮೊಬೈಲ್ ಗೆ ಬಂದಲ್ಲಿ ಅದನ್ನು ಬೇರೆಯವರಿಗೆ ರವಾನಿಸದಿರಿ ಮತ್ತು ಈ ಮಾಹಿತಿಯನ್ನು ತಮ್ಮ ಕುಟುಂಬದವರಿಗೆ, ನೆರೆಕೆರೆಯವರಿಗೆ ತಿಳಿಸಿ. ಇಂತಹ ಮಾಹಿತಿಗಳನ್ನು ಬೇರೆಯವರಿಗೆ ರವಾನಿಸುವುದು ಕೂಡ ಕಾನೂನು ಬಾಹಿರವಾಗಿದ್ದು ಶಿಕ್ಷಾರ್ಹವಾಗಿರುತ್ತದೆ.
ಯಾವುದೇ ರಾಜಕೀಯ, ಧಾರ್ಮಿಕ ವಿಷಯಗಳ ಅವಹೇಳನಕಾರಿ, ಪ್ರಚೋದನಾಕಾರಿ ಪೋಸ್ಟ್ ಗಳನ್ನು ಮತ್ತು ವೀಡಿಯೋಗಳನ್ನು ತಯಾರಿಸುವುದು ಮತ್ತು ಅದನ್ನು ಬೇರೆಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹವಾಗಿರುತ್ತದೆ.
ದೇಶದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹಾಗೂ ಮತೀಯ ಸೌಹಾರ್ದತೆಯನ್ನು ಕಾಪಾಡಲು ಸಾರ್ವಜನಿಕರು ಯಾವುದೇ ತರಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಕೂಡದು ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ಈ ವಿಷಯಕ್ಕೆ ಸಂಬಂಧಿಸಿ ಯಾವುದೇ ವಿಜಯೋತ್ಸವ, ಮೆರವಣಿಗೆ, ಸಿಡಿಮದ್ದು, ಸಿಡಿಸುವುದ ಮತ್ತು ಆಕ್ಷೇಪಾರ್ಹ ಘೋಷಣೆ ಕೂಗುವುದು, ಅವಹೇಳನಕಾರಿ ಘೋಷಣೆ ಯಾ ಪೋಸ್ಟರು, ಬ್ಯಾನರ್ ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ.
ಎಲ್ಲಾ ಸಾರ್ವಜನಿಕರು ಶಾಂತಿಯಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ವರ್ತಿಸಬೇಕು ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕಿ ನೀಶಾ ಜೇಮ್ಸ್ ವಿನಂತಿಸಿದ್ದಾರೆ.













