ಅವಿಭಜಿತ ದಕ ಜಿಲ್ಲೆಯ ಸ್ಟಾರ್ಟ್ಅಪ್ ಕಂಪೆನಿಗಳ ಪ್ರೋತ್ಸಾಹ ನೀಡುವಂತೆ ನಿರ್ಮಲಾ ಸೀತಾರಾಮನ್ ಗೆ ಯಶ್ಪಾಲ್ ಸುವರ್ಣ ಮನವಿ
ಉಡುಪಿ: ಉಡುಪಿ-ಮಂಗಳೂರಿನಲ್ಲಿ ಪ್ರಾರಂಭಗೊಂಡಿರುವ ಅನೇಕ ಸ್ಟಾರ್ಟ್ಅಪ್ ಕಂಪನಿಗಳ ಬೆಳವಣಿಗೆಗೆ ಅನುಕೂಲಕರ ನಿಯಮ ರೂಪಿಸಿ ಕೇಂದ್ರ ಬಜೆಟ್ ನಲ್ಲಿ ಅವಕಾಶ ಕಲ್ಪಿಸುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಟಾರ್ಟ್ ಅಪ್ ಕಂಪೆನಿಗಳಿಗೆ ವಿಶೇಷ ಪ್ರೋತ್ಸಾಹ ನೀಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರಿಗೆ ಮನವಿ ಮಾಡಿದರು.
ಉಡುಪಿ-ಮಂಗಳೂರು ಭಾಗದಲ್ಲಿ 25 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಮೂಲಕ 15,000 ಕ್ಕೂ ಅಧಿಕ ಇಂಜಿನಿಯರ್ ಗಳನ್ನು 150 ಕ್ಕೂ ಹೆಚ್ಚು ಪದವಿ ಕಾಲೇಜುಗಳ ಮೂಲಕ 40,000 ಕ್ಕೂ ಅಧಿಕ ಪದವೀಧರರನ್ನು ಪ್ರತಿ ವರ್ಷ ಉದ್ಯೋಗ ಕ್ಷೇತ್ರಕ್ಕೆ ಒದಗಿಸುತ್ತಿದೆ.
15 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಹಾಗೂ 15 ಕ್ಕೂ ಅಧಿಕ ಇನ್ಕ್ಯುಬೇಷನ್ ಸೆಂಟರ್ ಗಳು ಕಾರ್ಯಾಚರಿಸುತ್ತೇವೆ.
ಉಡುಪಿ ಮತ್ತು ಮಂಗಳೂರು ಉತ್ತಮ ಶಿಕ್ಷಣ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಕರಾವಳಿ ಪ್ರದೇಶವು ಸ್ಟಾರ್ಟ್ ಅಪ್ ಗಳಿಗೆ ಪೂರಕ ಪ್ರದೇಶವಾಗಿ ಬೆಳೆದು ಬರುತ್ತಿದ್ದು, ಉಡುಪಿಯ ರೋಬೋ ಸಾಫ್ಟ್ ಟೆಕ್ನಾಲಜೀಸ್ ಹಾಗೂ ನಿವೀಸ್ ಸೊಲ್ಯೂಷನ್ಸ್ ಮೊದಲಾದ ಹಲವು ಕಂಪೆನಿಗಳು ಗಮನಾರ್ಹ ಪ್ರಗತಿ ಸಾಧಿಸಿದ್ದು ಉಡುಪಿ ಮಂಗಳೂರು ಭಾಗದ ಸ್ಟಾರ್ಟ್ ಅಪ್ ಕಂಪನಿಗಳಿಗೆ ಉತ್ತೇಜನ ನೀಡಲು ಬಜೆಟ್ ನಲ್ಲಿ ಸೂಕ್ತ ಅವಕಾಶ ಕಲ್ಪಿಸಿ ಈ ಭಾಗದ ಸ್ಟಾರ್ಟ್ಅಪ್ ಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.