ಅ.27ರಿಂದ ಮಂಗಳೂರು-ತಿರುವನಂತಪುರಂ ನೇರ ವಿಮಾನ: ಕರಾವಳಿ ನಗರಗಳ ನಡುವೆ ಇನ್ನು ಕೇವಲ 80 ನಿಮಿಷಗಳ ಪ್ರಯಾಣ!
ಮಂಗಳೂರು: ಅಕ್ಟೋಬರ್ 27 ರಿಂದ, ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯು ಮಂಗಳೂರು ಮತ್ತು ತಿರುವನಂತಪುರ ನಡುವೆ ಹೊಸ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ವಾರದಲ್ಲಿ ಮೂರು ದಿನ ಲಭ್ಯವಿರುವ ಈ ಸೇವೆಯು ಎರಡು ಕರಾವಳಿ ನಗರಗಳ ನಡುವಿನ ಸಂಪರ್ಕವನ್ನು ಸುಲಭಗೊಳಿಸಲಿದೆ. ಪ್ರಸ್ತುತ ರೈಲಿನಲ್ಲಿ ಸುಮಾರು 9 ಗಂಟೆಗಳಿರುವ ಪ್ರಯಾಣದ ಸಮಯವು ಈ ವಿಮಾನದಿಂದಾಗಿ ಕೇವಲ 80 ನಿಮಿಷಗಳಿಗೆ ಇಳಿಯಲಿದೆ. ಈ ಮೂಲಕ ವ್ಯಾಪಾರ, ಪ್ರವಾಸೋದ್ಯಮ ಮತ್ತು ವೈಯಕ್ತಿಕ ಪ್ರಯಾಣಕ್ಕೆ ದೊಡ್ಡ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಪ್ರಸ್ತುತ, ಈ ಎರಡು ನಗರಗಳ ನಡುವೆ ವೇಗದ ಸಾರಿಗೆ ಸಂಪರ್ಕಕ್ಕಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಲಭ್ಯವಿದ್ದು, 620 ಕಿ.ಮೀ. ದೂರವನ್ನು ಕ್ರಮಿಸಲು ಸುಮಾರು 8 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಹೊಸ ವಿಮಾನ ಸೇವೆಯಿಂದಾಗಿ ಪ್ರಯಾಣಿಕರು 7 ಗಂಟೆಗೂ ಅಧಿಕ ಸಮಯವನ್ನು ಉಳಿಸಬಹುದಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಹೊಸ ಮಾರ್ಗದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, “ಪ್ರಕೃತಿ, ಸಂಸ್ಕೃತಿ ಮತ್ತು ಪ್ರಶಾಂತತೆ ಮೇಳೈಸುವ ಒಂದು ಕರಾವಳಿಯಿಂದ ಮತ್ತೊಂದು ಕರಾವಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ,” ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.
ಈಗಾಗಲೇ ಮಂಗಳೂರಿನಿಂದ ಮುಂಬೈ, ಹೊಸದಿಲ್ಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ದುಬೈ, ಅಬುದಾಬಿ, ದಮ್ಮಾಮ್, ಬಹರೈನ್, ದೋಹಾ, ಜಿದ್ದಾ ಮತ್ತು ಕುವೈತ್ಗೆ ನೇರ ವಿಮಾನ ಸಂಪರ್ಕವಿದ್ದು, ಈ ಪಟ್ಟಿಗೆ ಈಗ ತಿರುವನಂತಪುರಂ ಕೂಡ ಸೇರ್ಪಡೆಯಾಗಿದೆ.
ಹೊಸ ವಿಮಾನ ಸೇವೆ: ಅ. 27ರಿಂದ ಮಂಗಳೂರು-ತಿರುವನಂತಪುರಂ ನಡುವೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾರಾಟ
ವಾರದಲ್ಲಿ 3 ದಿನ: ಮಂಗಳೂರಿನಿಂದ ಸೋಮ, ಬುಧ, ಶುಕ್ರವಾರ ಮತ್ತು ತಿರುವನಂತಪುರಂದಿಂದ ಮಂಗಳವಾರ, ಗುರು, ಶನಿವಾರ ಸೇವೆ
ಸಮಯ ಉಳಿತಾಯ: ರೈಲಿನಲ್ಲಿ ಸುಮಾರು 9 ಗಂಟೆಗಳ ಪ್ರಯಾಣ, ವಿಮಾನದಲ್ಲಿ ಕೇವಲ 1 ಗಂಟೆ 20 ನಿಮಿಷ
ಕರಾವಳಿ ಸಂಪರ್ಕ: ಕರ್ನಾಟಕ ಮತ್ತು ಕೇರಳದ ಪ್ರಮುಖ ಕರಾವಳಿ ನಗರಗಳಿಗೆ ನೇರ ಸಂಪರ್ಕ
ವೇಳಾಪಟ್ಟಿ: ಮಂಗಳೂರಿನಿಂದ ಬೆಳಿಗ್ಗೆ 8:45ಕ್ಕೆ, ತಿರುವನಂತಪುರಂದಿಂದ ಮುಂಜಾನೆ 4:25ಕ್ಕೆ ವಿಮಾನ ಹೊರಡಲಿದೆ













