ಆರೆಸ್ಸೆಸ್ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಸರಿಯಾಗಿದೆ: ರಮಾನಾಥ ರೈ
ಮಂಗಳೂರು: ಆರೆಸ್ಸೆಸ್ ಚಟುವಟಿಕೆಗಳ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಸರಿಯಾಗಿದೆ. ಕಾಂಗ್ರೆಸ್ ಪಕ್ಷ ಪ್ರಿಯಾಂಕ್ ಪರ ಇದೆ ಎಂದು ಕೆಪಿಸಿಸಿ ಉಪಾಧ್ಯಕ್ಷ , ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಆರೆಸ್ಸೆಸ್ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ. ದ.ಕ. ಜಿಲ್ಲೆಯಲ್ಲೂ ವಾತಾವರಣ ಕಲುಷಿತಗೊಳ್ಳಲು ಆರೆಸ್ಸೆಸ್ ಪ್ರಭಾವವೇ ಕಾರಣ ಎಂದು ರಮಾನಾಥ ರೈ ಆರೋಪಿಸಿದರು.
ಧರ್ಮಾಧರಿತ ರಾಜಕಾರಣ, ಯಾವುದೇ ಸಂಘಟನೆಯ ಪರ ಕಾಂಗ್ರೆಸ್ ಇಲ್ಲ. ಕಾಂಗ್ರೆಸ್ ನವರು ಸೈದ್ಧಾಂತಿಕ ನಿಲುವನ್ನು ಒಪ್ಪಿಕೊಂಡವರು. ನಾವು ಕಾಂಗ್ರೆಸ್ ನ ಸೈದ್ಧಾಂತಿಕ ನಿಲುವನ್ನು ಇನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ ಎಂದರು.
ತಾನು ಕಾಂಗ್ರೆಸ್ನ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಆರೆಸ್ಸೆಸ್ ನಿಲುವನ್ನು ಸದಾ ವಿರೋಧಿಸಿಕೊಂಡು ಬಂದವನು. ತನ್ನಂತೆ ಕಾಂಗ್ರೆಸ್ ನ ಸೈದ್ಧಾಂತಿಕ ನಿಲುವನ್ನು ಒಪ್ಪಿಕೊಂಡವರು ದೊಡ್ಡ ಸಂಖ್ಯೆಯಲ್ಲಿ ಪಕ್ಷದಲ್ಲಿದ್ದಾರೆ ಎಂದು ರೈ ಹೇಳಿದರು.
ದ.ಕ. ಜಿಲ್ಲೆಯ ಅಭಿವೃದ್ಧಿ ಗೆ ಕಾಂಗ್ರೆಸ್ ಕೊಡುಗೆ ದೊಡ್ಡದು. ಸ್ವಾತಂತ್ರ್ಯ ಹೋರಾಟಗಾರ ಶ್ರೀನಿವಾಸ ಮಲ್ಯರಿಂದ ಈ ತನಕ ಕಾಂಗ್ರೆಸ್ ನಲ್ಲಿ ಯಾರೆಲ್ಲ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಮಿಂಚಿದ್ದಾರೊ ಅವರೆಲ್ಲ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ತಾನು ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಸಾಧ್ಯವಿರುವ ಕೊಡುಗೆಗಳನ್ನು ನೀಡಿದ್ದೇನೆ ಎಂದರು.
ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಎಲ್ಲಾ ಕಾರ್ಯಕ್ರಮಗಳು ಮತ ಗಳಿಸಲು, ಅವರ ಉದ್ದೇಶ ಚುನಾವಣೆ ಗೆಲ್ಲುವುದು ಆಗಿದೆ. ತಾಲಿಬಾನ್ ಸಚಿವರನ್ನು ತಂದು ಹೇಳಿಕೆ ಕೊಡಿಸುವ ಬಿಜೆಪಿ ಎಂತಹ ನಿಲುವನ್ನು ಹೊಂದಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು ಎಂದು ರೈ ಟೀಕಾ ಪ್ರಹಾರ ಮಾಡಿದರು.
ಆರೆಸ್ಸೆಸ್ ಗೆ ಕಾಂಗ್ರೆಸ್ನ ಮನೆಯವರು ಹಣ ಕೊಡುತ್ತಾರೆ ಎಂದು ಬಿಜೆಪಿ ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ರಮಾನಾಥ ರೈ ‘ರವಿಕುಮಾರ್ ಅವರಿಗೆ ತಿಳಿವಳಿಕೆಯ ಕೊರೆತೆ ಇದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಜಿ. ಹೆಗ್ಡೆ, ಬೇಬಿ ಕುಂದರ್, ಬಿ.ಎಲ್.ಪದ್ಮನಾಭ ಕೋಟ್ಯಾನ್, ಎಸ್.ಅಪ್ಪಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ದಿನೇಶ್ ಮೂಳೂರು, ಸದಾಶಿವ ಶೆಟ್ಟಿ, ಟಿ.ಕೆ.ಸುಧೀರ್, ಗಿರೀಶ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ಮಂಜುಳಾ ನಾಯಕ್, ರಮಾನಂದ ಪೂಜಾರಿ, ಸಜೀತ್ ಶೆಟ್ಟಿ ವಾಮಂಜೂರು, ಯೋಗೀಶ್ ಕುಮಾರ್, ಸುನೀಲ್ ಬಜೀಲಕೇರಿ , ಶಬೀರ್ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.