ಉಡುಪಿ ಉದ್ಯಮಿ ವಿಲಾಸ್ ನಾಯಕ್‌ಗೆ ಜಾಮೀನು ರಹಿತ ವಾರೆಂಟ್ ಜಾರಿ
ಉಡುಪಿ ಮೂಲದ ಹನುಮಾನ್ ಗ್ರೂಪ್ ಆಫ್ ಕಂಪೆನಿಗಳ ಉದ್ಯಮಿ ಚಿಟ್ಪಾಡಿ ನಿವಾಸಿ ವಿಲಾಸ್ ನಾಯಕ್ ಅವರಿಗೆ ಉಡುಪಿಯ ಗ್ರಾಹಕರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಅಮಲ್ಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕ್ರಿಧಾರಕರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಈ ಪ್ರಕರಣದಲ್ಲಿ ಸತತ ಎರಡನೇ ಬಾರಿಗೆ ವಾರೆಂಟ್ ಜಾರಿಗೊಳಿಸಿದ್ದು, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
2011ರಲ್ಲಿ ಸುವಿಧಾ ಹೋಮ್ಸ್ ಎಂಬ ಯೋಜನೆಯಲ್ಲಿ ವಿಲಾಸ್ ನಾಯಕ್ ತಮ್ಮ ಸೆರೆನ್ ಐಸೆಲ್ಸ್ ಸಂಸ್ಥೆಯಿಂದ ಹಣ ಪಡೆದುಕೊಂಡಿದ್ದು, ನಿಗದಿತ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸದೆ ವಿಳಂಬ ಮಾಡಿದ್ದಾರೆ. ಕಳಪೆ ಗುಣಮಟ್ಟದ ವಸತಿ ಸಮುಚ್ಚಯ ನಿರ್ಮಾಣವಾಗಿದೆ. ಹಾಗಾಗಿ, ತಾವು ನೀಡಿದ್ದ ಹಣ ವಾಪಸ್ ನೀಡುವಂತೆ ಗ್ರಾಹಕರಿಬ್ಬರು ಉಡುಪಿಯ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ದೂರನ್ನು 2018ರಲ್ಲಿ ಇತ್ಯರ್ಥಪಡಿಸಿದ್ದ ಗ್ರಾಹಕರ ನ್ಯಾಯಾಲಯ, ವಿಲಾಸ್ ನಾಯಕ್, ವೀಣಾ ನಾಯಕ್ ಸಹಿತ ಮೂವರಿಗೆ ಪಡೆದ ಹಣವನ್ನು ಬಡ್ಡಿ ಸಹಿತ ವಾಪಸ್ ನೀಡುವ ಜೊತೆಗೆ ತಲಾ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿತ್ತು.
ಈ ತೀರ್ಪನ್ನು ಪ್ರಶ್ನಿಸಿ ವಿಲಾಸ್ ನಾಯಕ್ ಮತ್ತಿತರರು ರಾಜ್ಯ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ಅಲ್ಲಿ ಆ ಅರ್ಜಿಯನ್ನು ತಿರಸ್ಕರಿಸಿದ ಗ್ರಾಹಕರ ಆಯೋಗ, ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಹಕರು 2025ರಲ್ಲಿ ಅಮಲ್ಜಾರಿ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ನೋಟೀಸ್ ಪಡೆದರೂ ಹಾಜರಾಗದ ಹಿನ್ನೆಲೆಯಲ್ಲಿ ವಿಲಾಸ್ ವಿರುದ್ಧ ಪ್ರಕರಣದ ವಿಚಾರಣೆಯ ಆರಂಭಿಕ ಹಂತದಲ್ಲಿ ವಾರೆಂಟ್ ಜಾರಿಗೊಳಿಸಲಾಗಿತ್ತು.
ತಾನು ದೆಹಲಿಯ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡಿಕೊಳ್ಳುತ್ತಿದ್ದೇನೆ. ತನಗೆ ಬೆನ್ನು ನೋವಿದ್ದ ಕಾರಣ ಹಾಜರಾಗುತ್ತಿಲ್ಲ ಎಂದು ನೆಪ ಮಾಡಿ ವಿಲಾಸ್ ನಾಯಕ್ ಹಲವು ಬಾರಿ ತಮ್ಮ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆದುಕೊಂಡಿದ್ದರು. ಈ ಬಗ್ಗೆ ವೈದ್ಯಕೀಯ ದಾಖಲೆಯನ್ನೂ ಹಾಜರುಪಡಿಸಿದ್ದರು.
ಆದರೆ, ಅದನ್ನು ಪರಿಗಣಿಸದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಮುಂದಿನ ವಿಚಾರಣಾ ದಿನಾಂಕದಂದು ತಪ್ಪದೆ ಹಾಜರಾಗುವಂತೆ ಸೂಚಿಸಿದ್ದರೂ ವಿಲಾಸ್ ಗೈರುಹಾಜರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿ ಬಿಸಿ ಮುಟ್ಟಿಸಿದೆ.













