ಉಡುಪಿ ಕಂಬಳ ಕೆರೆ ಶಂಕುಸ್ಥಾಪನೆ ಗೊಂದಲ: ಬಡಗಬೆಟ್ಟುವಿನಲ್ಲಿ ಇಂದು (ಫೆ.28) ನಿಷೇಧಾಜ್ಞೆ ಜಾರಿ

Spread the love

ಉಡುಪಿ ಕಂಬಳ ಕೆರೆ ಶಂಕುಸ್ಥಾಪನೆ ಗೊಂದಲ: ಬಡಗಬೆಟ್ಟುವಿನಲ್ಲಿ ಇಂದು (ಫೆ.28) ನಿಷೇಧಾಜ್ಞೆ ಜಾರಿ

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ, 80 ಬಡಗಬೆಟ್ಟು ಗ್ರಾಮದ ಸ.ನಂ 11/1 ರಲ್ಲಿ 6.30 ಎಕ್ರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಮೀನಿನಲ್ಲಿ ಉಡುಪಿ ಕಂಬಳ ಕೆರೆ ಶಂಕುಸ್ಥಾಪನೆ ವಿಚಾರದಲ್ಲಿ ಗೊಂದಲವಿದ್ದು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಫೆಬ್ರವರಿ 28 ರಂದು ಬೆಳಿಗ್ಗೆ 06.00 ಗಂಟೆಯಿಂದ ರಾತ್ರಿ 10.00 ಗಂಟೆವರೆಗೆ 80 ಬಡಗಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆ ಉಡುಪಿ ತಾಲ್ಲೂಕಿನ, ಮಣಿಪಾಲ ಪೊಲೀಸ್ ಠಾಣಾ ಸರಹದ್ದು, 80 ಬಡಗಬೆಟ್ಟು ಗ್ರಾಮದ ಸ.ನಂ 11/1 ರಲ್ಲಿ 6.30 ಎಕ್ರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಮೀನಿನಲ್ಲಿ ಫೆಬ್ರವರಿ 28 ರಂದು ಬೆಳಿಗ್ಗೆ 10:00 ಗಂಟೆಗೆ ನೂತನವಾಗಿ ಕಂಬಳ ಕ್ರೀಡಾ ಕ್ರೀಡಾಂಗಣ ಇದರ ಗುದ್ದಲಿ ಪೂಜೆ ನಡೆಯಲಿದ್ದು ಜಿಲ್ಲೆಯ ಶಾಸಕರು ಹಾಗೂ ಸಂಸದರ ಸಹಿತ ಸುಮಾರು 200 ಜನ ಭಾಗವಹಿಸಲಿದ್ದು, ಸದರಿ ಕಂಬಳಕ್ಕೆ ಜಮೀನು ಕಾಯ್ದಿರಿಸಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿರುತ್ತದೆ. ಅಧಿಕೃತವಾಗಿ ಮಾರ್ಚ್ 4 ರಂದು ಕಾರ್ಯಕ್ರಮ ಆಯೋಜಿಸುವ ಕುರಿತು ಈಗಾಗಲೇ ಜಿಲ್ಲಾಡಳಿತ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಅದಕ್ಕೆ ಫೆಬ್ರವರಿ 28 ರಂದು ಸುಮಾರು 200 ಜನ ಸೇರಿ ಅನಧಿಕೃತವಾಗಿ ಕಾರ್ಯಕ್ರಮ ಆಯೋಜಿಸಿರುವುದರಿಂದ ಗಲಾಟೆಗಳಾಗುವ ಸಂಭವ ಇರುವುದರಿಂದ ಮಣಿಪಾಲ ಪೊಲೀಸ್ ಠಾಣಾ ಸರಹದ್ದು, 80 ಬಡಗಬೆಟ್ಟು ಗ್ರಾಮದ ಸ.ನಂ 11/1 ರಲ್ಲಿ 6.30 ಎಕ್ರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಾದಿರಿಸಿದ ಜಮೀನು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಫೆಬ್ರವರಿ 28 ರಂದು ಬೆಳಿಗ್ಗೆ 06.00 ಗಂಟೆಯಿಂದ ರಾತ್ರಿ 10.00 ಗಂಟೆವರೆಗೆ ಬಿ.ಎನ್.ಎಸ್.ಎಸ್ ಕಲಂ.163 ರೀತ್ಯಾ ಜಿಲ್ಲಾದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ ನಿಷೇಧಾಜ್ಞೆ ಹೊರಡಿಸಿದ್ದು ಯಾವುದೇ ಶಸ್ತ್ರಾಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದು, ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳು, ಕಲ್ಲುಗಳು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಶೇಖರಿಸುವುದು ಮತ್ತು ತಯಾರಿಸುವುದು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಮಾಡುವುದು ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಪ್ರಯೋಗ ಮಾಡುವುದು, ಮತ್ತು ಚಿತ್ರಗಳನ್ನು ಸಂಕೇತಗಳನ್ನು ಭಿತ್ತಿ ಪತ್ರಗಳನ್ನು ಅಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments