ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತರಿಂದ ಶ್ರದ್ಧಾಭಕ್ತಿಯಿಂದ ಪಾಮ್ ಸಂಡೆ ಆಚರಣೆ

Spread the love

ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತರಿಂದ ಶ್ರದ್ಧಾಭಕ್ತಿಯಿಂದ ಪಾಮ್ ಸಂಡೆ ಆಚರಣೆ

ಉಡುಪಿ: ಯೇಸುಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ಭಾನುವಾರ ಹಬ್ಬ ಎಂದೇ ಪ್ರಸಿದ್ದಿ ಪಡೆದಿರುವ ಪಾಮ್ ಸಂಡೆಯನ್ನು ಜಿಲ್ಲೆಯಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಉಡುಪಿ ದರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕೆಮ್ಮಣ್ಣು ಸಂತ ತೆರೆಸಾ ಚರ್ಚಿನಲ್ಲಿ ನಡೆದ ಪಾಮ್ ಸಂಡೆ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಫಿಲಿಪ್ ನೆರಿ ಆರಾನ್ಹಾ, ಪೆರಂಪಳ್ಳಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಇದರ ಪ್ರಾಂಶುಪಾಲರಾದ ವಂ|ಡೊಮಿನಿಕ್ ಲೋಬೊ ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಕ್ರೈಸ್ತರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಯೇಸುವಿನ ಸ್ಮರಣೆ ಮಾಡಿದರು. ಚರ್ಚುಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಬಲಿಪೂಜೆಯನ್ನು ನೆರವೇರಿಸಲಾಯಿತು.

ಧರ್ಮಪ್ರಾಂತ್ಯ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ದೇವಾಲಯದ ಪ್ರಧಾನ ಧರ್ಮಗುರು ವಂ ವಲೇರಿಯನ್ ಮೆಂಡೊನ್ಸಾ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರೆ, ತೊಟ್ಟಂ ಸಂತ ಅನ್ನಮ್ಮ ದೇವಾಲಯಲ್ಲಿ ಧರ್ಮಗುರು ವಂ|ಡೆನಿಸ್ ಡೆಸಾ ಹಾಗೂ ಬೆಂಗಳೂರಿನ ಸಂತ ಪೀಟರ್ ಗುರುಮಠದ ಪ್ರಾಧ್ಯಾಪಕರಾದ ವಂ|ಡಾ|ಸುನೀಲ್ ಡಿಸೋಜಾ ಮತ್ತು ಡಿಕನ್ ಸ್ಟೀಫನ್ ರೊಡ್ರಿಗಸ್ ಉಪಸ್ಥಿತಿಯಲ್ಲಿ ಪಾಮ್ ಸಂಡೆಯ ಧಾರ್ಮಿಕ ವಿಧಿಗಳು ಜರುಗಿದವು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಶ್ರದ್ಧಾಭಕ್ತಿಯಿಂದ ಆಯಾ ಚರ್ಚಿನ ಧರ್ಮಗುರುಗಳ ನೇತೃತ್ವದಲ್ಲಿ ಪಾಮ್ ಸಂಡೆ ಜರುಗಿತು.

ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಯೇಸು ಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ಜಗತ್ತಿನಾದ್ಯಂತ ಪಾಮ್ ಸಂಡೆ ಆಚರಿಸಲಾಗುತ್ತದೆ. ಕರಾವಳಿಯಲ್ಲಿ ಧರ್ಮಗುರುಗಳಿಂದ ಆಶೀರ್ವದಿಸಲ್ಪಟ್ಟ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪವಿತ್ರ ಸಪ್ತಾಹವು ಕ್ರೈಸ್ತರಿಗೆ ಮಹತ್ವದಾಗಿದ್ದು ಈ ಸಪ್ತಾಹದ ಗುರುವಾರ ತನ್ನ ಶಿಷ್ಯರೊಂದಿಗೆ ಯೇಸುವಿನ ಕೊನೆಯ ಭೋಜನ ಹಾಗೂ ಶಿಷ್ಯರ ಪಾದಗಳನ್ನು ತೊಳೆದ ದಿನವನ್ನು ನೆನೆದರೆ ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ಗುಡ್ ಫ್ರೈಡೆ ಆಚರಿಸಲಾಗುತ್ತದೆ. ಅಂದು ಇಡೀ ದಿನ ಉಪವಾಸ ಮತ್ತು ಧ್ಯಾನದಲ್ಲಿ ಕ್ರೈಸ್ತರು ತಮ್ಮ ದಿನವನ್ನು ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ.


Spread the love