ಉಪ್ಪಿನಂಗಡಿ| ದನ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ
ಉಪ್ಪಿನಂಗಡಿ: ಹಟ್ಟಿಯಿಂದ ದನವನ್ನು ಕದ್ದುಕೊಂಡು ಹೋಗಿ ದನದ ಮಾಲಕನ ತೋಟದಲ್ಲೇ ಅದನ್ನು ಕೊಂದು ಅದರ ಕರುಳು ಸಹಿತ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಅಲ್ಲೇ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48), ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಸೆ.4ರಂದು ನಸುಕಿನ ವೇಳೆ ಪೆರ್ನೆಯ ಕಡಂಬು ನಿವಾಸಿ ದೇಜಪ್ಪ ಮೂಲ್ಯರ ಹಟ್ಟಿಯಿಂದ ದನವನ್ನು ಕದ್ದು, ದೇಜಪ್ಪ ಮೂಲ್ಯರ ಜಾಗದಲ್ಲೇ ಅದನ್ನು ಕೊಂದು ಅದರ ಹೊಟ್ಟೆಯೊಳಗಿನ ಕರುಳು ಸೇರಿದಂತೆ ತ್ಯಾಜ್ಯವನ್ನು ಹೊರತೆಗೆದು, ಅದನ್ನು ಅಲ್ಲೇ ಎಸೆದು ಹೋಗಿರುವುದಾಗಿ ದೂರಲಾಗಿತ್ತು. ದುಷ್ಕರ್ಮಿಗಳ ಇಂತಹ ಹೀನ ಕೃತ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.