ಉಳ್ಳಾಲ: ತಡೆಗೋಡೆ ನಿರ್ಮಾಣದ ವೇಳೆ ಗುಡ್ಡ ಕುಸಿದು ಓರ್ವ ಕಾರ್ಮಿಕ ಸಾವು
ಮಂಗಳೂರು: ತಡೆಗೋಡೆ ನಿರ್ಮಾಣದ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲಾಪು ಸಮೀಪದ ಸೇವಂತಿಗುತ್ತು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರನ್ನು ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಹನುಮಕಟ್ಟೆ ನಿವಾಸಿ ಬಾಳಪ್ಪ ಎಂದು ಗುರುತಿಸಲಾಗಿದೆ. ಮನೆಯೊಂದರ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಈ ಘಟನೆ ನಡೆದಿದೆ.

ಮಂಗಳವಾರ ಜೆಸಿಬಿ ಸಹಿತ ವಲಸೆ ಕಾರ್ಮಿಕರಾದ ಬಾಳಪ್ಪ, ಹನುಮಂತ, ಭೀಮಪ್ಪ, ಶಿವು ಎಂಬವರು ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಈ ವೇಳೆ ಮನೆಯ ಹಿಂಭಾಗದ ಎತ್ತರದ ಗುಡ್ಡದ ಮಣ್ಣು ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಾರ್ಮಿಕರಾದ ಬಾಳಪ್ಪ, ಹನುಮಂತ, ಭೀಮಪ್ಪ ಮಣ್ಣಿನಡಿ ಸಿಲುಕಿದ್ದಾರೆ. ಹನುಮಂತ ಮತ್ತು ಭೀಮಪ್ಪ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದು, ಮಣ್ಣಿನಡಿ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಳಪ್ಪನನ್ನ ಸ್ಥಳೀಯರು ಹರಸಾಹಸ ಪಟ್ಟು ಹೊರ ತೆಗೆದರೂ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ.












