ಉಳ್ಳಾಲ: ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮಾನವನ ಅಸ್ಥಿಪಂಜರ ಪತ್ತೆ!

Spread the love

ಉಳ್ಳಾಲ: ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮಾನವನ ಅಸ್ಥಿಪಂಜರ ಪತ್ತೆ

ಮಂಗಳೂರು: ಮರದ ರೆಂಬೆಗೆ ಹಗ್ಗದಿಂದ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮಾನವನ ತಲೆ ಬುರುಡೆ, ಅಸ್ಥಿಪಂಜರ ಮತ್ತು ಇತರೆ ಅವಶೇಷಗಳು ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರದ ಅಕ್ಷಯ ಫಾರ್ಮ್ ನೊಳಗಡೆ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.

ಅಕ್ಷಯ ಫಾರ್ಮ್ ಒಳಗಡೆಯ ಮರದ ಕೆಳಗಡೆ ಮಾನವನ ಅಸ್ಥಿ ತಲೆಬುರುಡೆ ಮತ್ತು ಅವಶೇಷಗಳು ಪತ್ತೆಯಾಗಿವೆ. ಫಾರ್ಮ್ ನೊಳಗಡೆ ತೋಟದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರಿಗೆ ಇಂದು ಬೆಳಗ್ಗೆ ಅಸ್ಥಿಗಳು ಕಾಣಸಿಕ್ಕಿವೆ. ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಇದು ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತದೆ. ಮರದ ಗೆಲ್ಲಿನಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿವೆ. ಮತ್ತೊಂದು ಗೆಲ್ಲಲ್ಲಿ ಕೇಸರಿ ಶಾಲು ಜೋತು ಬಿದ್ದಿದೆ. ಬರ್ಮುಡಾದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆಯೆಂದು ಹೇಳಲಾಗಿದೆ.

ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ಸೋಕೊ (ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡವು ಭೇಟಿ ನೀಡಿದ್ದು ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನ ಸಂಸ್ಕರಿಸಿ ಪರಿಶೀಲನೆಗೆ ಕಳಿಸಲಾಗಿದೆ. ದೇಹವು ಸಂಪೂರ್ಣ ಕೊಳೆತು ಹೋಗಿದ್ದು ಎಲುಬು ಬುರುಡೆಯ ಅವಶೇಷಗಳು ಮಾತ್ರ ಉಳಿದಿದ್ದು ಅನೇಕ ತಿಂಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ.

ಅಕ್ಷಯ ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದು ಇದರೊಳಗೆ ಘಟನೆ ಹೇಗೆ ನಡೆಯಿತೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಅನೇಕ ಮರದ ಮಿಲ್ಲುಗಳಿದ್ದು, ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಫ್ಯಾಕ್ಟರಿಗಳಿಂದ ಬರುವ ರಾಸಾಯನಿಕ ದುರ್ವಾಸನೆಯ ಮಧ್ಯೆ ಶವ ಕೊಳೆತ ವಾಸನೆ ಯಾರಿಗೂ ತಿಳಿದು ಬಂದಿಲ್ಲವೆಂದು ಸ್ಥಳೀಯರು ಹೇಳಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments