ಎಂಆರ್ಪಿಎಲ್ನ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಬೆಂಕಿ; ಓರ್ವರಿಗೆ ಗಾಯ
ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ (CHTU) ಬುಧವಾರ ಮಧ್ಯಾಹ್ನದ ವೇಳೆಗೆ ಅಧಿಕ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲ್ಡ್ ಸೆಪರೇಟರ್ನಲ್ಲಿ ಬಿರುಕು ಉಂಟಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ.
ಎಂಆರ್ಪಿಎಲ್ ನೀಡಿದ ಮಾಹಿತಿಯ ಪ್ರಕಾರ, ಘಟನೆಯ ಬಳಿಕ ಪೀಡಿತ ಘಟಕದ ಬ್ಯಾಟರಿ ಲಿಮಿಟ್ಗಳನ್ನು ತಕ್ಷಣವೇ ಪ್ರತ್ಯೇಕಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಿಸಲು ಮತ್ತು ನಂದಿಸಲು ಕಂಪನಿಯ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಅಗ್ನಿಶಾಮಕ ತಂಡಗಳನ್ನು ನಿಯೋಜಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಪೀಡಿತ ಘಟಕವನ್ನು ಖಾಲಿ ಮಾಡಿಸಲಾಯಿತು.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಘಟನೆಯನ್ನು ಸುರಕ್ಷಿತವಾಗಿ ನಿರ್ವಹಿಸುವ ಭಾಗವಾಗಿ ಅಗ್ನಿಶಾಮಕ ಕಾರ್ಯಾಚರಣೆ ಇನ್ನೂ ಕೆಲಕಾಲ ಮುಂದುವರಿಯುವ ಸಾಧ್ಯತೆ ಇದೆ.
ಘಟನೆಯಲ್ಲಿ ಓರ್ವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಬಾಧಿತರಾದ ಇತರ ಸಿಬ್ಬಂದಿಗೆ ಹೊರರೋಗಿ ವಿಭಾಗದಲ್ಲಿ (OPD) ಚಿಕಿತ್ಸೆ ನೀಡಲಾಗಿದೆ.
ಯಾವುದೇ ಸಾವು ಸಂಭವಿಸಿಲ್ಲ ಹಾಗೂ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಸಿಬ್ಬಂದಿ ಹಾಗೂ ಘಟಕದ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ ಎಂದು ಎಂಆರ್ಪಿಎಲ್ ತಿಳಿಸಿದೆ. ಎಂಆರ್ಪಿಎಲ್ ಆವರಣದ ಒಳಗೆ ಹಾಗೂ ಹೊರಗೆ ಇರುವ ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದಂತೆ ಕಂಪನಿ ಮನವಿ ಮಾಡಿದೆ.
ಏತನ್ಮಧ್ಯೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಸೌಕರ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಗಾಜುಗಳು ಒಡೆದಿವೆ ಎಂಬ ವರದಿಗಳು ಸರಿಯಲ್ಲ. ಎಂಆರ್ಪಿಎಲ್ ಸುತ್ತಮುತ್ತಲಿನ ಹಲವು ಪ್ರದೇಶಗಳಂತೆ ವಿಮಾನ ನಿಲ್ದಾಣದಲ್ಲಿಯೂ ಸ್ಫೋಟದ ಪರಿಣಾಮದ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚಿನ ಪರಿಶೀಲಿತ ಮಾಹಿತಿಗಳು ಲಭ್ಯವಾದಂತೆ ಹಂಚಿಕೊಳ್ಳಲಾಗುವುದು.













