ಎಲ್ಲಿ ಭಕ್ತರು ಇರುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ : ವಿನಯ ಕುಮಾರ್ ಸೊರಕೆ
ಉಡುಪಿ: ಎಲ್ಲಿ ಭಕ್ತರು ಇರುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂಬ ಮಾತು ನಮ್ಮ ಸಂಸ್ಕೃತಿಯ ಸಾರಾಂಶ. ದೇವರು ದೂರದಲ್ಲಿ ಇರುವವನಲ್ಲ, ನಮ್ಮ ಮನಸ್ಸಿನ ಭಕ್ತಿಯಲ್ಲೇ ಪ್ರತ್ಯಕ್ಷನಾಗುತ್ತಾನೆ. ನಾವು ಶುದ್ದ ಮನಸ್ಸಿನಿಂದ, ನಿಸ್ವಾರ್ಥ ಭಾವದಿಂದ ಪ್ರಾರ್ಥಿಸಿದಾಗ ದೇವರ ಸಾನ್ನಿಧ್ಯವನ್ನು ಅನುಭವಿವುದಕ್ಕೆ ಸಾಧ್ಯವಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿ, ಎಷ್ಟೇ ಆಸ್ತಿ, ಅಂತಸ್ತು ಇದ್ದರೂ ಮಾನಸಿಕ ನೆಮ್ಮದಿ ದೊರಕಲು ದೇವರ ಅನುಗ್ರಹ ಅತ್ಯವಶ್ಯಕ. ಭಕ್ತಿ, ಧರ್ಮ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ. 12 ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಶ್ರದ್ದಾ ಭಕ್ತಿಯಿಂದ ತೊಡಗಿಸಿಕೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಫೂರ್ ಮಾತನಾಡಿ, ಕರಾವಳಿ ಭಾಗದ ಜನರ ಸೌಹಾರ್ದ ಮನೋಭಾವಕ್ಕೆ ಇಲ್ಲಿ ಹಾಸುಹೊಕ್ಕಾದ ಧಾರ್ಮಿಕ ಶ್ರದ್ದೆ, ಅಗಾಧವಾದ ನಂಬಿಕೆಗಳೇ ಕಾರಣ. ಇಲ್ಲಿನ ಜನರು ಕೇವಲ ಧರ್ಮವನ್ನು ಆಚರಿಸುವುದಲ್ಲ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದ್ದರಿಂದಲೇ ವಿಭಿನ್ನ ಸಂಪ್ರದಾಯಗಳು, ಆಚರಣೆಗಳಿದ್ದರೂ ಎಲ್ಲರೂ ಸೌಹಾರ್ದದಿಂದ, ಪರಸ್ಪರ ಸಹಕಾರದಿಂದ ಬದುಕುತ್ತಿದ್ದಾರೆ ಎಂದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ ಎಸ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷಶ್ರೀಕಾಂತ್ ಉಪಾಧ್ಯ, ಮಾಂಡವಿ ಬಿಲ್ಡರ್ಸ್ನ ಜೇಸನ್ ಡಯಾಸ್, ಮುಂಬಯಿ ಉದ್ಯಮಿ ಭರತ್ ಶೆಟ್ಟಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತಸರ ಮಹೇಶ್ ಠಾಕೂರ್, ಶಾಂತಿ ಸಾಗರ್ ಹೊಟೇಲ್ ಗ್ರೂಪ್ನ ಪ್ರಭಾಕರ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಎಂ. ಪ್ರಭಾಕರ ಶೆಟ್ಟಿ ಶೇಖರ ಶೆಟ್ಟಿ ಯು. ಸುದೇಶ್ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು. ಶೆಟ್ಟಿ ಶಮಿತಾ ಎಸ್. ಭಂಡಾರಿ ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷಬಿ. ಮಾಧವ ಪೂಜಾರಿ ಸ್ವಾಗತಿಸಿ, ಅರ್ಪಿತಾ ಪ್ರಶಾಂತ ಶೆಟ್ಟಿ ನಿರೂಪಿಸಿ, ವಂದಿಸಿದರು.













