ಏಕಾಏಕಿ ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿ; ಚಿಕಿತ್ಸೆ ಫಲಕಾರಿಯಾಗದೇ ಸವಾರ ಸಾವು
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡ್ ಭಾರತ್ ಬೆಂಜ್ ಶೋ ರೂಮ್ ಬಳಿ ಗುರುವಾರ ತಡರಾತ್ರಿ ಏಕಾಏಕಿ ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.
ಮೃಪಟ್ಟವರನ್ನು ಮಂಗಳೂರು ನಗರದ ಪಂಜಿಮೊಗರು ತ್ರಿಶಾ ಕಾಲೇಜ್ ಬಳಿಯ ಉರಂದಾಡಿ ಗುಡ್ಡೆ ಪಡುಕೋಡಿ ನಿವಾಸಿ ಆರ್ ಸ್ವಾಮಿನಾಥನ್(51) ಎಂದು ಗುರುತಿಸಲಾಗಿದೆ. ಮುಂಬೈನಿಂದ ತಿರುವನಂತಪುರಕ್ಕೆ ಸರಕುಗಳನ್ನು ಸಾಗಿಸುತ್ತಿದ್ದ ಲಾರಿ ಮುಲ್ಕಿ ಸಮೀಪದ ಕೋಲ್ಕಾಡ್ ಭಾರತ್ ಬೆಂಜ್ ಶೋ ರೂಮ್ ತಲುವುತ್ತಿದ್ದಂತೆ ಅದರ ಚಾಲಕ ವಿನುರಾಜ್ ಎಂಬಾತ ಏಕಾಏಕಿ ಲಾರಿ ನಿಲುಗಡೆಗೊಳಿಸಿದ್ದ ಎನ್ನಲಾಗಿದೆ.
ಆ ವೇಳೆ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಲಾರಿಯ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಆರ್ ಸ್ವಾಮಿನಾಥನ್ ರವರಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಮುಕ್ಕ ಆಸ್ಪತ್ರೆಗೆ ದಾಖಲಿಸಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಹೆದ್ದಾರಿ ಇಲಾಖೆಯ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಲಾರಿ ಚಾಲಕ ವಿನುರಾಜ್ ವಿರುದ್ಧ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












