ಕಂಬಳ ಅಭಿಮಾನಿಗಳಿಗೆ ಸಿಹಿ ಸುದ್ದಿ – ಕಂಬಳ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ರಾಜ್ಯ ಸರಕಾರ ನಿರ್ಧಾರ
ಮಂಗಳೂರು: ಕಂಬಳ ಅಭಿಮಾನಿಗಳಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದ್ದು, ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.
ಕಂಬಳ ಕ್ರೀಡೆಗೆ ರಾಜ್ಯ ಸರಕಾರಕ್ಕೆ ಅಧಿಕೃತ ಮಾನ್ಯತೆ ಘೋಷಣೆಯಾದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಅನ್ವಯವಾಗಲಿದೆ. ಕಂಬಳಕ್ಕೆ ಒಂದೆಡೆ ರಾಜ್ಯದ ಮಾನ್ಯತೆಯ ಸಿದ್ಧತೆ ಅಂತಿಮ ಹಂತದಲ್ಲಿದ್ದರೆ, ಇನ್ನೊಂದೆಡೆ ಕಂಬಳ ಅಸೋಸಿಯೇಶನ್ ನೇಮಕ ಪಟ್ಟಿಯನ್ನು ರಾಜ್ಯ ಸರಕಾರ ಅಂತಿಮಗೊಳಿಸಿದೆ. ಕಂಬಳ ಸಮಿತಿ ಅಧ್ಯಕ್ಷರೇ ಕಂಬಳ ಅಸೋಸಿಯೇಶನ್ಗೆ ಅಧ್ಯಕ್ಷರಾಗಿದ್ದು, ಉಳಿದಂತೆ ಗೌರವ ಸಲಹೆಗಾರರು, ಸದಸ್ಯರು ಸೇರಿದಂತೆ 13 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಕಂಬಳ ಅಸೋಸಿಯೇಶನ್ ಸ್ಥಾಪನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ, ಓಟಗಾರರು, ಕೋಣದ ಮಾಲೀಕರು, ಇತರರಿಗೆ ಸೌಲಭ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವೇ ಕಂಬಳ ಅಸೋಸಿಯೇಶನ್ಗೆ ಬೈಲಾ ಸಿದ್ಧಪಡಿಸುತ್ತಿದೆ.