ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಕಾಂಗ್ರೆಸ್ ಗೆ ಗೆಲುವು
ಕಡಬ: ಇದೇ ಮೊದಲ ಬಾರಿಗೆ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಹುಮತ ಗಳಿಸಿದೆ. ಬಿಜೆಪಿ ಐದು ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆ ಪ್ರಕ್ರಿಯೆ ಕ್ಷಿಪ್ರವಾಗಿ ನಡೆದಿದ್ದು, 9:45ರ ವೇಳೆ ಮುಕ್ತಾಯಗೊಂಡಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಳಾರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮನ್ನಾ ಜಬೀನ್ ಜಯ ಗಳಿಸಿದರೆ, 8ನೇ ಪಿಜಕ್ಕಳ ವಾರ್ಡ್ ನಲ್ಲಿ ಬಿಜೆಪಿಯ ದಯಾನಂದ ಗೌಡ ಪಿ. ಅವರು ಕಾಂಗ್ರೆಸ್ ಅಭ್ಯರ್ಥಿ ಅಶ್ರಫ್ ಶೇಡಿಗುಂಡಿ ವಿರುದ್ಧ ಜಯ ಗಳಿಸಿದ್ದಾರೆ. ಕೋಡಿಬೈಲು ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಕುಸುಮಾ, ಮೂರಾಜೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಪನ್ಯ ವಾರ್ಡ್ ಕಾಂಗ್ರೆಸ್ ಮಹಮ್ಮದ್ ಫ಼ೈಝಲ್, ಕೋಡಿಂಬಾಳ ವಾರ್ಡ್ ಬಿಜೆಪಿ ಅಕ್ಷತಾ ಮಣಿಮುಂಡ ಗೆಲುವು ಸಾಧಿಸಿದ್ದಾರೆ.
ಬೆದ್ರಾಜೆ ವಾರ್ಡ್ ನಲ್ಲಿ ಕಾಂಗ್ರೆಸ್ ಸಿ.ಜೆ.ಸೈಮನ್, ದೊಡ್ಡಕೊಪ್ಪ ವಾರ್ಡ್ ನಲ್ಲಿ ಬಿಜೆಪಿಯ ಗುಣವತಿ ಗೆಲುವು ಸಾಧಿಸಿದ್ದು, ಮಾಲೇಶ್ವರ ವಾರ್ಡ್ ನಲ್ಲಿ ಕಾಂಗ್ರೆಸ್ ನ ಮುಹಮ್ಮದ್ ಹನೀಫ್, ಮಜ್ಜಾರು ವಾರ್ಡ್ ನಲ್ಲಿ ಬಿಜೆಪಿಯ ಮೋಹನ್, ಕಡಬ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲಾವತಿ ಶಿವರಾಮ, ಪುಳಿಕುಕ್ಕು ವಾರ್ಡ್ ನಲ್ಲಿ ಕಾಂಗ್ರೆಸ್ ನ ಕೃಷ್ಣಪ್ಪ, ಪಣೆಮಜಲ್ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೋಹಿತ್ ಗೌಡ ಗೆಲುವು ಸಾಧಿಸಿದ್ದಾರೆ.