ಕದ್ರಿ ಪೊಲೀಸರ ಕಾರ್ಯಾಚರಣೆ: ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ಯುವಕನ ಬಂಧನ
ಮಂಗಳೂರು: ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಕದ್ರಿ ಪೊಲೀಸ್ ಠಾಣೆಯ ಅಧಿಕಾರಿಗಳು ಯುವಕನೊಬ್ಬನನ್ನು ಬಂಧಿಸಿ ಎಂಡಿಎಮ್ಎ (MDMA) ಮಾದಕವಸ್ತು ಹಾಗೂ ಬೈಕ್ ವಶಪಡಿಸಿಕೊಂಡಿರುವ ಘಟನೆ ಜನವರಿ 17, 2026ರಂದು ನಡೆದಿದೆ.
ಬಂಧಿತ ಆರೋಪಿಯನ್ನು ಜೂಡ್ ಮಾಥ್ಯೂ (20) ಎಂದು ಗುರುತಿಸಲಾಗಿದ್ದು, ಆತನು ಮನೋಜ್ ಜೊಸೆಫ್ ಅವರ ಪುತ್ರ. ಆರೋಪಿಯು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ, ಚುನಯಮಕ್ಕಿಲ್ ಹೌಸ್ ವಾಸಿಯಾಗಿದ್ದಾನೆ.
ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಕೈಲಾಸ ಕಾಲೋನಿ ಸಮೀಪ, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಹಿಂದಿರುವ ಖಾಲಿ ಜಾಗದಲ್ಲಿ ಯುವಕನೊಬ್ಬ ಬೈಕ್ನಲ್ಲಿ ಎಂಡಿಎಮ್ಎ ಮಾದಕವಸ್ತುವನ್ನು ಹೊಂದಿದ್ದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು. ಈ ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ ಆರೋಪಿಯಿಂದ 5.20 ಗ್ರಾಂ ತೂಕದ ಎಂಡಿಎಮ್ಎ ಮಾದಕವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಎನ್ಎಸ್ ಬೈಕ್ ಸೇರಿ ಒಟ್ಟು ಸುಮಾರು ರೂ.70,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.













