ಕರಾವಳಿ ಪ್ರದೇಶದಲ್ಲಿ ಕೇರಳ–ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಡಿಸಿಎಂ ಡಿ.ಕೆ. ಶಿವಕುಮಾರ್
ಮಂಗಳೂರು: ಕರಾವಳಿ ಭಾಗದಲ್ಲಿ ಕೇರಳ ಮತ್ತು ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರವಲ್ಲದೆ, ಹಿಂದಿನ ಬಿಜೆಪಿ ಸರ್ಕಾರವೂ ವಿಫಲವಾಗಿದೆ ಎಂದು ಒಪ್ಪಿಕೊಂಡರು. “ಮಂಗಳೂರು ಹಾಗೂ ಕರಾವಳಿ ಭಾಗದ ಜನ ಉದ್ಯೋಗಕ್ಕಾಗಿ ಮುಂಬೈ, ದುಬೈ, ಬೆಂಗಳೂರು ಸೇರಿದಂತೆ ಬೇರೆ ನಗರಗಳಿಗೆ ತೆರಳುತ್ತಿದ್ದಾರೆ. ಇಲ್ಲಿನ ಅಪಾರ ಪ್ರಕೃತಿ ಸಂಪತ್ತನ್ನು ನಾವು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದ್ದೇವೆ,” ಎಂದು ಅವರು ಹೇಳಿದರು.
ಕರಾವಳಿ ಭಾಗದ ಎಲ್ಲಾ ಶಾಸಕರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಅವರು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಪ್ರವಾಸೋದ್ಯಮ ನೀತಿ (ಟೂರಿಸಂ ಪಾಲಿಸಿ) ಕುರಿತು ವಿವರವಾಗಿ ಮಾತುಕತೆ ನಡೆಸಲಾಗಿದೆ. “ಕರಾವಳಿಗೆ ವಿಶೇಷ ಪ್ರವಾಸೋದ್ಯಮ ಯೋಜನೆ ರೂಪಿಸಬೇಕಾಗಿದೆ,” ಎಂದು ಡಿಕೆಶಿ ಹೇಳಿದರು.
ಬಹಳಷ್ಟು ಉದ್ಯಮಿಗಳು, ವಿಶೇಷವಾಗಿ ವಿದೇಶ, ಮುಂಬೈ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಮೂಲದವರು ಸ್ವಂತ ಊರಿಗೆ ಹೂಡಿಕೆ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಇಲ್ಲಿನ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಹೇಳಿದರು.
“ಕರಾವಳಿಯ ಯುವಕರು ಪ್ರಜ್ಞಾವಂತರಾಗಿದ್ದಾರೆ. ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋಗುವ ಬದಲು ಇಲ್ಲಿಯೇ ಉದ್ಯೋಗ ಸೃಷ್ಟಿಯಾಗುವಂತೆ ವ್ಯವಸ್ಥೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಕ್ಕೆ ವಿಶೇಷ ಟೂರಿಸಂ ಪಾಲಿಸಿ ರೂಪಿಸಲಾಗುವುದು,” ಎಂದು ಉಪಮುಖ್ಯಮಂತ್ರಿ ತಿಳಿಸಿದರು.
ಉದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ಮತ್ತಷ್ಟು ಚರ್ಚೆ ನಡೆಸಿ, ಎದುರಿಸುತ್ತಿರುವ ಸಮಸ್ಯೆಗಳು ಏನು, ಸರ್ಕಾರ ಯಾವ ರೀತಿಯ ಸಹಾಯ ನೀಡಬಹುದು ಎಂಬುದನ್ನು ಪರಿಶೀಲಿಸಲಾಗುವುದು. ಖಾಸಗಿ ಸಹಭಾಗಿತ್ವವೂ ಅಗತ್ಯವಿದ್ದು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ಕುರಿತು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ನೀಡಬೇಕು. ಸಿಆರ್‌ಜೆಡ್ (CRZ), ರಕ್ಷಣಾ ಇಲಾಖೆ, ಕರಾವಳಿ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನು ಸಭೆಗೆ ಕರೆಯಲಾಗಿದೆ ಎಂದು ಅವರು ಹೇಳಿದರು.
“ಕರಾವಳಿ ಭಾಗದಲ್ಲಿ ಇನ್ನೂ ಒಂದು ಫೈವ್‌ಸ್ಟಾರ್ ಹೋಟೆಲ್ ಕೂಡ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಎಲ್ಲಾ ಸೌಕರ್ಯಗಳು ಇಲ್ಲಿಗೆ ಬರಬೇಕು,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.













