ಕರ್ನಾಟಕ ಬಜೆಟಿನಲ್ಲಿ ಶಿಕ್ಷಣಕ್ಕಿಲ್ಲ ಆದ್ಯತೆ – ಎಸ್.ಐ.ಓ ಕರ್ನಾಟಕ

Spread the love

ಕರ್ನಾಟಕ ಬಜೆಟಿನಲ್ಲಿ ಶಿಕ್ಷಣಕ್ಕಿಲ್ಲ ಆದ್ಯತೆ – ಎಸ್.ಐ.ಓ ಕರ್ನಾಟಕ

ಬೆಂಗಳೂರು: ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ನೇತೃತ್ವದಲ್ಲಿ 2020ರ ಸಾಲಿನ ಬಜೆಟ್ ಮಂಡಿಸಿದ್ದು ಬಜೆಟಿನಲ್ಲಿ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿದೆ ಎಂದು ಕರ್ನಾಟಕ ರಾಜ್ಯ ಎಸ್.ಐ.ಓ ಸಂಘಟನೆ ಆರೋಪಿಸಿದೆ.

ಈ ಬಾರಿ ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿಯಲ್ಲಿಯೇ ತಿಳಿಸಿರುವಂತೆ ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಯಾವುದೇ ಪ್ರಸ್ತಾಪ ಈ ಬಜೆಟಿನಲ್ಲಿಲ್ಲ. ಮುಖ್ಯಮಂತ್ರಿಯವರು ಸ್ವತಃ ಬಜೆಟ್ ಭಾಷಣದಲ್ಲಿ ಹೇಳಿರುವಂತೆ ದೇಶದ ಅರ್ಥಿಕ ಸ್ಥಿತಿ ಉತ್ತಮವಾಗಿರದ ಈ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡಿ ಬಜೆಟಿನ ಒಂದು ದೊಡ್ಡ ಪಾಲನ್ನು ಮೀಸಲಿಡಬೇಕಾಗಿತ್ತು. ಆದರೆ ಮಂಡನೆಯಾದ ಈ ಬಜೆಟಿನಲ್ಲಿ ಎರಡು ಕ್ಷೇತ್ರವನ್ನು ಕಡೆಗಣಿಸಿರುವುದು ಸರಕಾರದ ಅಸಡ್ಡೆ ಧೋರಣೆಯನ್ನು ಎತ್ತಿ ತೋರಿಸುತ್ತಿದೆ.
ಶಿಕ್ಷಣದ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೂ ದೊಡ್ಡ ಅನ್ಯಾಯವಾಗಿದ್ದು ರಾಯಚೂರು ವಿಶ್ವವಿದ್ಯಾಲಯ ಮತ್ತು ಜನರ ಬೇಡಿಕೆಯಂತೆ ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜೊಂದನ್ನು ನೀಡಲು ವಿಫಲವಾಗಿದೆ. ಕೆಲವೊಂದು ಚಾಲ್ತಿಯಲಿದ್ದ ಯೋಜನೆಗಳನ್ನೇ ಸರಕಾರ ಈ ಬಾರಿಯ ಬಜೆಟಿನಲ್ಲಿ ಪ್ರಸ್ತಾಪಿಸಿದ್ದು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಯಾವುದೇ ನೂತನ ಯೋಜನೆಗಳು ಈ ಬಜೆಟಿನಲ್ಲಿ ಕಾಣಲು ಸಿಗುತ್ತಿಲ್ಲ.

ಈಗಾಗಲೇ ಕಳೆದ ಮಳೆಗಾಲದಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ 23 ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ ಸುಮಾರು 7777 ಶಾಲೆಗಳು ಹಾನಿಕ್ಕೊಳಗಾಗಿದ್ದವು. ಈ ಸಂಬಂಧ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದ್ದು ಈ ಶಾಲೆಗಳ ದುರಸ್ತಿಗೆ ಸ್ವತಃ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ತಕ್ಷಣಕ್ಕೆ 1500 ಕೋಟಿಗಳ ಪ್ರಸ್ತಾವನೆ ಇಟ್ಟಿದ್ದರು ಆದರೆ ಇದೀಗ ಈ ಬಜೆಟಿನಲ್ಲಿ ಸರಕಾರ ಶಾಲೆಗಳ ದುರಸ್ತಿಗೆ ಕೇವಲ 758 ಕೋಟಿ ಮೀಸಲಿಟ್ಟಿದೆ. ಈ ಅನುದಾನದಿಂದ ಸೂಕ್ತ ಸಮಯದಲ್ಲಿ ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ ಇದರಿಂದ ವಿದ್ಯಾರ್ಥಿಗಳು ತೊಂದರೆಗೆ ಒಳಪಡಲಿದ್ದಾರೆ.

400 ಸರಕಾರಿ ಉರ್ದು ಶಾಲೆಗಳಲ್ಲಿ ಉರ್ದುವಿನೊಂದಿಗೆ ಆಂಗ್ಲ ಮಾಧ್ಯಮ ನಡೆಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.ಈ ಮುಂಚೆ ಉರ್ದು ಶಾಲೆಯ ಅಭಿವೃದ್ದಿ ನಡೆಸಲು ಅಲ್ಪಸಂಖ್ಯಾತ ಇಲಾಖೆಗೆ ಜವಾಬ್ದಾರಿ ನೀಡಲಾಗಿತ್ತು. ಅದು ಯಾವ ರೀತಿ ಅಭಿವೃದ್ಧಿಗೆ ಶ್ರಮಿಸಿದೆ ಎಂಬ ಬಗ್ಗೆ ಯಾವುದೇ ಅಧ್ಯಯನ ವರದಿ ನೀಡದೆ ಏಕಾಏಕಿ ಆಂಗ್ಲ ಮಾಧ್ಯಮದ ಪ್ರಸ್ತಾಪ ಮಾಡಲಾಗಿದೆ. ಅದು ಕೂಡ ಕೇವಲ ಒಂದು ಕೋಟಿ ರೂಪಾಯಿ ಅನುದಾನ ಮೀಸಲಿಟ್ಟು ಕಣ್ಣಿಗೆ ಮಣ್ಣೆರೆಚುವ ಕೆಲಸ ಸರಕಾರ ನಡೆಸಿದೆ. ಈ ಬಜೆಟಿನಲ್ಲಿ ಮದ್ರಸಾ ಶಿಕ್ಷಣದ ಆಧುನೀಕರಣದ ಹಿನ್ನಲೆಯಲ್ಲೂ ಸೂಕ್ತವಾದ ಅನುದಾನವನ್ನು ಸರಕಾರ ನೀಡದಿರುವುದು ತಾರತಮ್ಯ ನೀತಿಯನ್ನು ಎತ್ತಿಹಿಡಿದಿದೆ. ಈ ಬಜೆಟಿನಲ್ಲಿ ಶಿಕ್ಷಣದ ಹಕ್ಕು ಕಾಯಿದೆಯಡಿಯಲ್ಲಿ ಕಡ್ಡಾಯವಾಗಿ ಆಗಬೇಕಾದ ವಿಚಾರಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಕಾಯಿದೆ ಅನುಷ್ಠಾನಕ್ಕೆ ಬಂದು ಹತ್ತು ವರ್ಷವಾದ ಮೇಲೆ ಅದರ ಅನುಷ್ಟಾನದ ಪರಿಣಾಮದ ಬಗ್ಗೆ ತಿಳಿಯಲು ಯಾವುದೇ ಯೋಜನೆಯನ್ನು ಪ್ರಸ್ತಾಪಿಸದಿರುವುದು ವಿಪರ್ಯಾಸವಾಗಿದೆ.

ಈ ಬಜೆಟಿನಲ್ಲಿ ಶಿಕ್ಷಣ ಸಂಬಂಧಿ ಸ್ವಾಗತರ್ಹ ಸಂಗತಿಯೆಂದರೆ “ಸಂಭ್ರಮ ಶನಿವಾರ”ದ ಹೆಸರಿನಲ್ಲಿ ತಿಣಗಳಿನಲ್ಲಿ ಎರಡು ಶನಿವಾರ ಬ್ಯಾಗ್ ರಹಿತವಾಗಿ ಮಕ್ಕಳು ಶಾಲೆಗೆ ಬರುವುದರ ಬಗ್ಗೆ ಪ್ರಸ್ತಾಪಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ

ಒಟ್ಟಿನಲ್ಲಿ 2020 ರ ಕರ್ನಾಟಕ ಬಜೆಟ್ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿದ್ದು ಕೆಲವೊಂದು ಯೋಜನೆಗಳನ್ನು ಪ್ರಸ್ತಾಪಿಸಿ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡಿದೆ. ಶ್ರೈಕ್ಷಣಿಕ ಕ್ಷೇತ್ರಕ್ಕೆ ಈ ಬಜೆಟ್ ಸೂಕ್ತವಾಗಿ ಸ್ಪಂದಿಸಿಲ್ಲವೆಂದು ಎಸ್.ಐ.ಓ ಕರ್ನಾಟಕ ಅಭಿಪ್ರಾಯ ಪಟ್ಟಿದೆ.


Spread the love