ಕಲ್ಯಾಣಪುರ ಕೆಥೊಲಿಕ್ ಸಭಾ ಸದಸ್ಯರ ಒಗ್ಗಟ್ಟು ಪ್ರದರ್ಶನಕ್ಕೆ ಸಾಕ್ಷಿಯಾದ ವಲಯ ಸಮ್ಮೇಳನ

Spread the love

ಕಲ್ಯಾಣಪುರ ಕೆಥೊಲಿಕ್ ಸಭಾ ಸದಸ್ಯರ ಒಗ್ಗಟ್ಟು ಪ್ರದರ್ಶನಕ್ಕೆ ಸಾಕ್ಷಿಯಾದ ವಲಯ ಸಮ್ಮೇಳನ

ಸಮ್ಮೇಳನದ ವಿಶೇಷತೆ

  • ಸಮ್ಮೇಳನಕ್ಕೆ ವೇದಿಕೆಯನ್ನು ವಿಶಿಷ್ಠ ರೀತಿಯಲ್ಲಿ ತೆಂಗಿನ ಸೋಗೆಗಳನ್ನು ಮತ್ತು ಮಾವಿನ ಮರದ ಎಲೆಗಳನ್ನು ಉಪಯೋಗಿಸಿ ನಿರ್ಮಿಸಲಾಗಿತ್ತು.
  • ವೇದಿಕೆಯ ಒಂದು ಬದಿಯಲ್ಲಿ ರೈತರ ಮನೆಯನ್ನು ನೆನಪಿಸುವ ರೀತಿಯ ಒಣ ಹುಲ್ಲಿನ ರಾಶಿಯನ್ನು ಹಾಕಲಾಗಿತ್ತು.

ಉಡುಪಿ: ಸೇವೆಗೆ ಅತೀ ವೇಗದಲ್ಲಿ ಪ್ರತಿಫಲ ಸಿಗಬೇಕು ಎನ್ನುವುದಕ್ಕಿಂತ ಸೇವೆಯ ಮೌಲ್ಯವನ್ನು ಅರಿಯುವಂತಾಗಬೇಕು ಎಂದು ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರುಗಳಾದ ವಂ| ಅನಿಲ್ ಪ್ರಕಾಶ್ ಕ್ಯಾಸ್ತಲಿನೊ ಹೇಳಿದರು.

ಅವರು ಭಾನುವಾರ ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚಿನ ವಠಾರದಲ್ಲಿ ಜರುಗಿದಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಲ್ಯಾಣಪುರ ವಲಯ ಸಮಿತಿಯ ಸಹಮಿಲನ ಉದ್ಘಾಟಿಸಿ ಮಾತನಾಡಿದರು.

ಕೆಥೊಲಿಕ್ ಸಭಾ ಸಂಘಟನೆ ತನ್ನ ಮೌಲ್ಯಯುತ ಸೇವೆಯನ್ನು ನೀಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದು ಪ್ರತಿ ವರ್ಷ ಹೊಸ ಚಿಂತನೆಯೊಂದಿಗೆ ಮುಂದುವರೆಯ ಬೇಕಾದ ಅವಶ್ಯಕತೆ ಇದೆ. ನಾವು ಮಾಡಿದ ಸೇವೆಗೆ ಕೂಡಲೇ ಪ್ರತಿಫಲ ಸಿಗಬೇಕು ಎನ್ನುವುದರ ಬದಲು ಮೌಲ್ಯಯುತ ಸೇವೆಯ ಬೆಲೆಯನ್ನು ಅರಿಯುವಂತಾಗಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಕೆಥೊಲಿಕ್ ಸಭಾ ಕೇಂದ್ರಿಯ ಸಮಿತಿ ಇದರ ಮಾಜಿ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ ಮಾತನಾಡಿ ಕಥೊಲಿಕ್ ಸಭಾ ಸಂಘಟನೆ ಪವಿತ್ರ ಧರ್ಮಸಭೆಯ ಮುಖವಾಣಿಯಂತೆ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿದೆ. ಹೇಗೆ ಒಂದು ಮರದ ಬಲ ಇರುವುದು ಅದರ ಬೇರುಗಳಲ್ಲಿ ಅದರಂತೆ ಒಂದು ಸಂಘಟನೆಯ ಬಲವಿರುವುದು ಅದರ ಘಟಕಗಳಲ್ಲಿ. ಇಂದು ಕೆಥೊಲಿಕ್ ಸಭಾ ಸಂಘಟನೆ ತನ್ನ ಸಮಾಜಮುಖಿ ಸೇವೆಯಿಂದ ಒಂದು ಬಲಿಷ್ಠ ಸಂಸ್ಥೆಯಾಗಿ ರೂಪುಗೊಂಡಿದ್ದು ಜನಸಾಮಾನ್ಯರ ಆಶೋತ್ತರಗಳಿಗೆ ಅನುಗುಣವಾಗಿ ಸೇವೆಯನ್ನು ನೀಡುತ್ತಿದೆ ಎಂದರು. ಜಾಗೃತಿ ನೀಡುವಲ್ಲಿ ಸಂಘಟನೆ ಪ್ರಮುಖ ಪಾತ್ರವನ್ನು ವಹಿಸಿದ್ದರ ಪರಿಣಾಮವಾಗಿ ಇಂದು ಗ್ರಾಮಪಂಚಾಯತ್ ಮಟ್ಟದಲ್ಲಿ ಅತೀ ಹೆಚ್ಚು ಸಂಖ್ಯೆಯ ಕ್ರೈಸ್ತ ಸಮುದಾಯದ ಸದಸ್ಯರನ್ನು ಹೊಂದಲು ಸಾಧ್ಯವಾಗಿದೆ. ಕೆಥೊಲಿಕ್ ಸಭಾ ಸಂಘಟನೆ ನಮ್ಮದೇ ಎಂಬ ಭಾವನೆ ಮೂಡಿದಾಗಿ ಅದನ್ನು ಇನ್ನಷ್ಟು ಬಲಿಷ್ಠವಾಗಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಘಟಕಗಳ, ವಲಯದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳನ್ನು, ಕೇಂದ್ರಿಯ ಹಂತದಲ್ಲಿ ಭಾಷಣ ಸ್ಪರ್ಧೆಯಲ್ಲಿ ಸಾಧನೆ ಮಾಡಿದವರನ್ನು ಹಾಗೂ ಇತರ ವಿವಿಧ ಕ್ಷೇತ್ರಗಳಾದ ಶಿಕ್ಷಣ, ಕ್ರೀಡೆ, ಸಮಾಜ ಸೇವೆ ಇವುಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣಪುರ ವಲಯ ಸಮಿತಿ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ವಹಿಸಿದ್ದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಲ್ಯಾಣಪುರ ವಲಯ ಶ್ರೀಸಾಮಾನ್ಯರ ಆಯೋಗದ ನಿರ್ದೇಶಕರಾದ ವಂ|ಜೊಸೇಫ್ ಮಚಾದೊ, ಅತಿಥಿ ಧರ್ಮಗುರು ವಂ ರೋಮನ್ ಮಸ್ಕರೇನ್ಹಸ್, ಕೆಂದ್ರೀಯ ಸಮಿತಿ ಮಾಜಿ ಅಧ್ಯಕ್ಷರಾದ ಎಲ್ ರೋಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್, ವಲಯ ಸಮಿತಿ ಸಂಚಾಲಕ ಸ್ಟೀವನ್ ಪ್ರಕಾಶ್ ಲೂವಿಸ್, ವಲಯ ಕಾರ್ಯದರ್ಶಿ ರೋಜಿ ಕ್ವಾಡ್ರಸ್, ಕೋಶಾಧಿಕಾರಿ ಫೆಲಿಕ್ಸ್ ಪಿಂಟೊ, ಕೊಳಲಗಿರಿ ಘಟಕದ ಅಧ್ಯಕ್ಷರಾದ ಫಾತಿಮಾ ಬಾರ್ನೆಸ್, ಕಾರ್ಯದರ್ಶಿ ಸಿರಿಲ್ ಮೊಂತೆರೋ ಉಪಸ್ಥಿತರಿದ್ದರು.

Photo Credit : Louis D’Souza, Sastan


Spread the love