ಕಲ್ಲಡ್ಕದಲ್ಲಿ ಕೋಮುಗಲಭೆ ಸೃಷ್ಟಿಸಲು ಹೊರಟಿರುವ ಕೋಮುವಾದಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಡಿವೈಎಫ್‍ಐ ಒತ್ತಾಯ

Spread the love

ಕಲ್ಲಡ್ಕದಲ್ಲಿ ಕೋಮುಗಲಭೆ ಸೃಷ್ಟಿಸಲು ಹೊರಟಿರುವ ಕೋಮುವಾದಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಡಿವೈಎಫ್‍ಐ ಒತ್ತಾಯ

ಮಂಗಳೂರು: ಮುಸ್ಲಿಂರ ರಂಜಾನ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಕಲ್ಲಡ್ಕದಲ್ಲಿ ಕ್ಷುಲ್ಲಕ ಕಾರಣಗಳನ್ನು ನೆಪವಾಗಿಟ್ಟು ಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ, ಆ ಮೂಲಕ ಕೋಮು ಹಿಂಸೆಯನ್ನು ಪ್ರಚೋದಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಕಲ್ಲಡ್ಕವನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣಾ ವರ್ಷದಲ್ಲಿ ಜಿಲ್ಲೆಯನ್ನು ಮತೀಯ ದ್ರುವೀಕರಣದತ್ತ ಒಯ್ಯುವ ತನ್ನ ಎಂದಿನ ಅಜೆಂಡಾವನ್ನು ಜಾರಿಗೊಳಿಸುವ ಗುಪ್ತ ಅಜೆಂಡಾವನ್ನು ಸಂಘ ಪರಿವಾರ ಹೊಂದಿದೆ ಎಂದು ಡಿವೈಎಫ್‍ಐ ದ.ಕ ಜಿಲ್ಲಾ ಸಮಿತಿ ಆರೋಪಿಸಿದೆ.

ನಿಷೇದಾಜ್ಞೆಯ ನಡುವೆಯೂ ಕ್ಷುಲ್ಲಕ ನೆಪಗಳನ್ನು ಸೃಷ್ಟಿಸಿಕೊಂಡು ಚೂರಿ ಇರಿತ, ಕಲ್ಲು, ಬಾಟ್ಲಿಗಳ ಎಸೆಯುವ ಮೂಲಕ ಕೋಮುಗಲಭೆ ಸೃಷ್ಟಿಸಲು ಯತ್ನಿಸುವ ಇಂತಹ ಕೋಮುವಾದಿ ಹುನ್ನಾರಗಳನ್ನು ಡಿವೈಎಫ್‍ಐ ದ.ಕ ಜಿಲ್ಲಾ ಸಮಿತಿಯು ಖಂಡಿಸುತ್ತದೆ. ಹಾಗೂ ಗಲಭೆ ಸೃಷ್ಟಿಸಲು ಪ್ರೇರೆಪಿಸಿರುವ ಸಂಘ ಪರಿವಾರದ ನಾಯಕರ ಮೇಲೆ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸುತ್ತದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತದ ನಂತರದ ದಿನಗಳಲ್ಲಿ ದೇಶದಾದ್ಯಂತ ಮುಸ್ಲಿಂರ ಮೇಲೆ ಕೋಮು ಹಿಂಸೆಗಳು, ದಲಿತರ ಮೇಲಿನ ದಾಳಿಗಳು ನಿರಂತರವಾಗಿ ನಡೆಯುತಿದೆ. ಉತ್ತರ ಪ್ರದೇಶದ ಮುಜಾಫರ್ ನಗರದ ಕೋಮುಗಲಭೆಯಿಂದ ಹಿಡಿದು ಕಲ್ಲಡ್ಕದ ಗಲಭೆವರೆಗೂ ನಡೆಯುವ ಕೋಮು ಹಿಂಸೆಯು ಆರ್‍ಎಸ್‍ಎಸ್ ಪ್ರಚೋದಿತವಾಗಿದೆ. ಆರ್‍ಎಸ್‍ಎಸ್‍ನ ಗಲಭೆ ಸೃಷ್ಟಿಸುವ ಇಂತಹ ಯತ್ನದ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಜನಸಾಮಾನ್ಯರು ಹಸಿವು, ಬಡತನ ಸೇರಿದಂತೆ ಅವರದ್ದೇ ಆದ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಗಲಭೆಗಳು ಅವರ ಸಂಕಟಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬ ಅರಿವು ಯುವಜನತೆಗೆ ಮೂಡಬೇಕಿದೆ. ರಾಜಕೀಯ ಪಿತೂರಿಗಳ ದಾಳಗಳಾಗದೆ ಯುವ ಜನತೆ ಈ ಕುರಿತು ಚಿಂತಿಸಬೇಕು ಎಂದು ಡಿವೈಎಫ್‍ಐ ಯುವಜನತೆಯನ್ನು ಒತ್ತಾಯಿಸಿದೆ.

ಜಿಲ್ಲಾಡಳಿತ ಯಾವ ಮುಲಾಜಿಗೂ ಬೀಳದೆ ಗಲಭೆಕೋರರನ್ನು ಹತ್ತಿಕ್ಕಬೇಕು, ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಡಿವೈಎಫ್‍ಐ ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love