ಕಳೆದ ಪರ್ಯಾಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದ್ದ 10 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಯತ್ನಿಸಿ
ಪ್ರಸಾದ್ ಕಾಂಚನ್ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಲಿ : ದಿನೇಶ್ ಅಮೀನ್
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಪ್ರಸಾದ್ ಕಾಂಚನ್ ಉಡುಪಿ ಶಾಸಕರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಪಾಲಿಗೆ ಶ್ರೀ ಕೃಷ್ಣನ ಕೃಪೆ ಇದೆ ಎಂಬ ಬಾಲಿಶ ಹೇಳಿಕೆ ನೀಡುವ ಬದಲು 2024ರ ಉಡುಪಿ ಪರ್ಯಾಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಘೋಷಣೆ ಮಾಡಿದ್ದ 10 ಕೋಟಿ ರೂಪಾಯಿ ಅನುದಾನವನ್ನು ತಮ್ಮದೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಮೂಲಕ ಬಿಡುಗಡೆಗೊಳಿಸಿ ಶ್ರೀ ಕೃಷ್ಣ ಕೃಪೆಗೆ ಪಾತ್ರರಾಗಲಿ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 30 ಸಾವಿರ ಮತಗಳಿಂದ ಸೋತು ಹತಾಶರಾಗಿರುವ ಪ್ರಸಾದ್ ಕಾಂಚನ್ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ಭಯದಿಂದ ತನ್ನ ಅಸ್ತಿತ್ವವನ್ನು ಉಳಿಸಲು ಶಾಸಕರ ವಿರುದ್ಧ ಇಂತಹ ಹತಾಶ ಹೇಳಿಕೆ ನೀಡುತ್ತಿರುವುದು ಕನಿಕರ ಮೂಡಿಸುತ್ತಿದೆ.
ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ಅಸ್ಕರ್ ಫೆರ್ನಾಂಡೀಸ್ ಅವರ ಕೃಪಾಕಟಾಕ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ಕಳೆದ ಚುನಾವಣೆಯಲ್ಲಿ ಲಕ್ಕಿಡಿಪ್ ಅಭ್ಯರ್ಥಿಯಾಗಿ ಉಡುಪಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ, ಉಡುಪಿಯ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಸಾದ ಕಾಂಚನ್ ಮೊನ್ನೆ ತನ್ನದೇ ಪಕ್ಷದ ಬ್ಲಾಕ್ ಕಾಂಗ್ರೆಸ್ ಮುಖಂಡನ ಜೊತೆ ನೂತನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲೇ ಎಳೆದಾಡಿಕೊಂಡು ಕಾಂಗ್ರೆಸ್ ಪಕ್ಷದ ಘನತೆಗೆ ಧಕ್ಕೆ ತಂದಿರುವುದು ಉಡುಪಿ ಜನತೆಗೆ ತಿಳಿಯದ ವಿಚಾರವಲ್ಲ.
ಹಿಂದುತ್ವ, ರಾಷ್ಟ್ರೀಯತೆ, ಅಭಿವೃದ್ಧಿ ವಿಚಾರದಲ್ಲಿ ತಮ್ಮ ಬದ್ಧತೆ ಹಾಗೂ ಸಿದ್ಧಾಂತದ ಮೂಲಕ ಚುನಾವಣೆ ಎದುರಿಸಿದ ಉಡುಪಿ ಶಾಸಕರಿಗೆ ಉಡುಪಿಯ ಪ್ರಬುದ್ಧ ಜನತೆ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಪ್ರಸಾದ್ ಕಾಂಚನ್ ರಾಜಕೀಯ ಅಪ್ರಬುದ್ಧತೆಗೆ ಉತ್ತರ ನೀಡಿದ್ದಾರೆ. ಈ ಗೆಲುವಿನ ಮೂಲಕ ಉಡುಪಿ ಶಾಸಕರಿಗೆ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣರ ಕೃಪಾಶೀರ್ವಾದ ಸದಾ ಇದೆ ಎಂಬುದು ಸಾಬೀತಾಗಿದೆ.
ಗೋ ಹತ್ಯೆ ವಿಚಾರಗಳಲ್ಲಿ ಎಂದಿಗೂ ರಾಜಿ ಮಾಡದ ಶಾಸಕರು ಮೊನ್ನೆ ಕುಂಜಾಲಿನಲ್ಲಿ ನಡೆದ ಘಟನೆಯಲ್ಲಿಯೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋ ಹತ್ಯೆಯನ್ನು ಹಿಂದೂ, ಮುಸ್ಲಿಂ ಅಥವಾ ಯಾರೇ ಮಾಡಿದರೂ ಕ್ಷಮಿಸುವ ಪ್ರಶ್ನೆಯೇ ಇಲ್ಲ, ಹಾಗೂ ಹಿಂದುತ್ವ, ಗೋ ರಕ್ಷಣೆ, ಅಭಿವೃದ್ಧಿಯ ಬಗ್ಗೆ ಶಾಸಕರ ಬದ್ಧತೆಯನ್ನು ಪ್ರಶ್ನಿಸುವ ಯೋಗ್ಯತೆ ಪ್ರಸಾದ್ ಕಾಂಚನ್ ಗೆ ಇಲ್ಲ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.