ಕಸ್ಟಮ್ ಅಧಿಕಾರಿಗಳು ಎಂದು ನಂಬಿಸಿ ಚಿನ್ನ ಲೂಟಿ: 5 ಆರೋಪಿಗಳ ಪತ್ತೆ
ಮಂಗಳೂರು: ಅಗೋಸ್ತ್ 13 ರಂದು ಬೆಳಿಗ್ಗೆ 7-00 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಹತ್ತಿರದ ಕೈರಾಲಿ ಹೋಟೆಲ್ನ ಸಮೀಪ ಆಟೋ ಕಾಯುತ್ತಿದ್ದಾಗ, ಯಾರೋ ಆರು ಜನ ಅಪರಿತರು ಇನ್ನೋವಾ ಕಾರಿನಲ್ಲಿ ಬಂದು ದೂರುದಾರಾದ ಶ್ರೀ ಹರಿ ಭಾನುದಾಸ ಥೋರಟ್ರನ್ನು ಸಂಪರ್ಕಿಸಿ ತಾವು ಕಸ್ಟಮ್ ಅಧಿಕಾರಿಗಳು, ನಿಮ್ಮ ವಿರುದ್ದ ಮಾಹಿತಿ ಇದೆ, ವಿಚಾರಣೆ ಮಾಡಬೇಕು ಎಂದು ತಿಳಿಸಿ, ತಮ್ಮೊಂದಿಗೆ ಬನ್ನಿ ಅಂತಾ ಗದರಿಸಿ, ಫಿರ್ಯಾದುದಾರರನ್ನು ಹಿಡಿದುಕೊಂಡು ಬಲವಂತವಾಗಿ ಬಿಳಿ ಬಣ್ಣದ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಉಡುಪಿ ಹೈವೇ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಲುಪಿದಾಗ ಫಿರ್ಯಾದುದಾರರ ಬಳಿ ಇದ್ದ ಸುಮಾರು 35,00,000/- ರೂಪಾಯಿ ಬೆಲೆ ಬಾಳುವ 350 ಗ್ರಾಂ ತೂಕದ ಶುದ್ಧ ಬಂಗಾರದ ಗಟ್ಟಿಯನ್ನು ಹೆದರಿಸಿ ಕಿತ್ತುಕೊಂಡು ದರೋಡೆ ಮಾಡಿ, ಫಿರ್ಯಾದುದಾರರನ್ನು ಕುಮಟಾ ತಾಲೂಕಿನ ಶಿರಸಿ ಬಳಿ ಅಂತ್ರವಳ್ಳಿ ಎಂಬಲ್ಲಿ ಬಿಟ್ಟು ಪರಾರಿಯಾಗಿರುತ್ತಾರೆ.
ಈ ಬಗ್ಗೆ ಫಿರ್ಯಾದಿಯವರು ಕುಮುಟಾ ಠಾಣೆಯಲ್ಲಿ ದೂರು ನೀಡಿದಾಗ ಝೀರೋ ಎಫ್.ಐ.ಆರ್ ರಡಿಯಲ್ಲಿ ಪ್ರಕರಣ ದಾಖಲಿಸಿ ಸರಹದ್ದಿನ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ಮಂ.ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು ಠಾಣೆಯಲ್ಲಿ ಅ.ಕ್ರ 171/2025 ಕಲಂ 310(2), 137(2), 204 ಬಿ.ಎನ್. ಎಸ್ ನಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣವನ್ನು ಭೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಆಯುಕ್ತರು, ಸಿಸಿಬಿ ಅಧಿಕಾರಿ ಮತ್ತು ಕೇಂದ್ರ ಉಪವಿಭಾಗದಿಂದ ತಂಡವನ್ನು ರಚಿಸಿರುತ್ತೆ. ಪ್ರಕರಣದ ತನಿಖೆಯಲ್ಲಿ ಕಂಡ ಬಂದ ತಾಂತ್ರಿಕ ಸಾಕ್ಷ್ಯಾಧಾರಗಳಿಂದ ಮತ್ತು ಇತರೆ ಮಾಹಿತಿಗಳಿಂದ ಈವರೆಗೆ ಒಟ್ಟು 5 ಜನ ಆರೋಪಿಗಳನ್ನು ದಿನಾಂಕ 18-08-2025 ರಂದು ಸಂಜೆ ಮಹಾರಾಷ್ಟ್ರದ ಪುಣೆ ಎಂಬಲ್ಲಿ ಪತ್ತೆ ಮಾಡಲಾಗಿದೆ. ಆರೋಪಿಗಳು ವಿಚಾರಣಾ ಕಾಲದಲ್ಲಿ ತಪ್ಪೋಪ್ಪಿಗೆ ಮಾಡಿದ್ದು ದೊಚ್ಚಿದ್ದ ಚಿನ್ನವನ್ನು ಮಾರಾಟ ಮಾಡಿದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದು, ಮುಂದೆ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳಲಾಗುವುದು. ದರೋಡೆ ಮಾಡಿದ್ದ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ಸ್ವಾಧೀನ ಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.