ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸಲ್ಲ; ನೂತನ ಉಡುಪಿ ಎಸ್ಪಿ ಡಾ. ಸಂಜೀವ್ ಪಾಟೀಲ್ ಎಚ್ಚರಿಕೆ

Spread the love

ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸಲ್ಲ; ನೂತನ ಉಡುಪಿ ಎಸ್ಪಿ ಡಾ. ಸಂಜೀವ್ ಪಾಟೀಲ್ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಯಾವುದೇ ಪಕ್ಷ, ಜಾತಿಯ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದ್ದಲ್ಲಿ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಉಡುಪಿ ಜಿಲ್ಲಾ ನೂತನ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ನೀಡಿದ್ದಾರೆ.

ಅವರು ಗುರುವಾರ ನಿಕಟಪೂರ್ವ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಅವರಿಂದ ಅಧಿಕಾರವನ್ನು ಸ್ವೀಕರಿಸಿದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ, ಸಾಂಸ್ಕೃತಿವಾಗಿ, ಹಾಗೂ ಆರ್ಥಿಕವಾಗಿ ತನ್ನದೇ ಆದ ಮಹತ್ವವನ್ನು ಜಗತ್ತಿಗೆ ಸಾರಿದೆ. ಜಿಲ್ಲೆಯ 99% ಜನ ಸದಾ ಶಾಂತಿ ಬಯಸುವವರಾಗಿದ್ದು ಅವರ ಪರವಾಗಿ ಕೆಲಸ ಮಾಡುವುದು ಹಾಗೂ ಜಿಲ್ಲೆಯಲ್ಲಿ ಪೋಲಿಸ್ ಜನ ಸ್ನೇಹಿ ಸೇವೆ ನೀಡುವುದೇ ನಮ್ಮ ಉದ್ದೇಶ. 1% ಜನ ಮಾತ್ರ ವಕ್ರ ಮನೋಭಾವದರವಿದ್ದು ಅಂತಹವರು ಎಲ್ಲಾ ಕಡೆಗಳಲ್ಲೂ ಇರುತ್ತಾರೆ ಅಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಬಂದಿದ್ದು, ಜಿಲ್ಲೆಯ ಸಂಪೂರ್ಣ ಪರಿಸ್ಥಿತಿಯ ಕುರಿತು ಹಿಂದಿನ ವರಿಷ್ಠಾಧಿಕಾರಿಯಾಗಿದ್ದ ಕೆ. ಅಣ್ಣಾಮಲೈ,ಹಾಗೂ ಕೆ.ಟಿ. ಬಾಲಕೃಷ್ಣರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಪೋಲಿಸ್ ಠಾಣೆಗೆ ಭೇಟಿ ನೀಡುವುದರೊಂದಿಗೆ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಲು ನಿರ್ಧರಿಸಿದ್ದೇನೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡಲಿದೆ. ಯಾವುದೇ ರೀತಿಯ ಅಕ್ರಮ ನಡೆದುದರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸ್ಥಳೀಯ ಪೋಲಿಸ್ ಠಾಣೆಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದು. ಅವರಿಂದ ಸ್ಪಂದನೆ ದೊರೆಯದೆ ಹೋದಲ್ಲಿ ಮೇಲಾಧಿಕಾರಿಗಳಿಗೆ ಅಲ್ಲಿಯೂ ಸಹಕಾರ ಲಭಿಸದಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದರು.

ಜಿಲ್ಲೆಯಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತಿವಾರ ಸಾರ್ವಜನಿಕರೊಂದಿಗೆ  ನೇರ ಫೋನ್ ಇನ್ ಕಾರ್ಯಕ್ರಮವನ್ನು ಆರಂಭಿಸಲಾಗುವುದು. ಜನರ ಸಮಸ್ಯೆಗಳಿಗೆ ತಾನೇ ಸ್ವತಃ ಪರಿಹಾರ ಸೂಚಿಸುವುದರೊಂದಿಗೆ ನನ್ನ ಅನುಪಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳು ಪರಿಹಾರ ನೀಡಲಿದ್ದಾರೆ. ಮಂಗಳೂರಿನಲ್ಲೂ ಇಂತಹ ಒಂದು ಪ್ರಯತ್ನ ಮಾಡಿದ್ದು ಉತ್ತಮ ಪ್ರತಿಕ್ರಿಯೆ ಸಾರ್ವಜನಿಕರಿಂದ ವ್ಯಕ್ತವಾಗಿತ್ತು ಎಂದರು.

ಜಿಲ್ಲೆಯಲ್ಲಿನ ಯಾವುದೇ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತನ್ನೊಂದಿಗೆ ಮುಕ್ತವಾಗಿ ಹೇಳಿಕೊಳ್ಳಬಹುದು ಅಲ್ಲದೆ ಮುಂದಿನ ದಿನಗಳಲ್ಲಿ ತುಳು ಭಾಷೆಯನ್ನು ಕಲಿಯುವ ಹೊಸ ಪ್ರಯತ್ನ ಕೂಡ ಮಾಡುತ್ತಿದ್ದೇನೆ. ಮಂಗಳೂರಿನಲ್ಲಿ ಇರುವಾಗ ಇದನ್ನು ಆರಂಭಿಸಿದ್ದೆ ಅದನ್ನು ಪೂರ್ಣವಾಗಿ ಕಲಿಯುವ ಕೆಲಸ ಮಾಡುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಿಂದ ಅಭಿನಂದನೆ: ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಸಂಜೀವ್ ಪಾಟೀಲ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಭಿನಂದನೆ ಸಲ್ಲಿಸಿದರು.

 


Spread the love