ಕಾಪು; ನಾಲ್ವರು ಅಂತರ್ ಜಿಲ್ಲಾ ಕಳವು ಆರೋಪಿಗಳ ಬಂಧನ

Spread the love

ಕಾಪು; ನಾಲ್ವರು ಅಂತರ್ ಜಿಲ್ಲಾ ಕಳವು ಆರೋಪಿಗಳ ಬಂಧನ

ಕಾಪು: ಕಾಪು, ಶಿರ್ವ ವ್ಯಾಪ್ತಿಯಲ್ಲಿನ ವಿವಿಧ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸರು ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ನಿವಾಸಿ ರಮೇಶ್ ವಡ್ಡೇರ್ (30) ಈತನ ಪ್ರಸ್ತುವಾಸ ಬಂಗ್ಲೆಗುಡ್ಡೆ ಶಿರ್ವ, ಬಾಗಲಕೋಟೆ ಜಿಲ್ಲೆ ಬಿಲ್ಕೆನೂರು ನಿವಾಸಿ ವಿಜಯ ಹುಲಗಪ್ಪ ವಡ್ಡರ್ (30) ಹಾಲಿ ವಾಸ ಬಂಗ್ಲೆ ಗುಡ್ಡೆ ಶಿರ್ವ, ಗೋವಾ ನಿವಾಸಿ ನೂರ್ ಮಹಮ್ಮದ್ ಶೇಖ್ (46) ಹಾಲಿ ವಾಸ ಚಿತ್ರದುರ್ಗ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆ ಶೃಂಗೇರಿ ಬೆಳಂದೂರು ನಿವಾಸಿ ರವಿ (33) ಹಾಲಿ ವಾಸ ಬಂಗ್ಲೆ ಗುಡ್ಡೆ ಶಿರ್ವ ಎಂದು ಗುರುತಿಸಲಾಗಿದೆ.

ಫೆಬ್ರವರಿ 4ರಂದು ಮಣಿಪುರ ಗ್ರಾಮದ ದೆಂದೂರು ಕಟ್ಟೆಯ ಮನೋಜ್ ಬಾರ್ ಅ್ಯಂಡ್ ರೆಸ್ಟೋರೆಂಟ್ ನ ಒಳಗೆ ಕಳ್ಳರು ಬಾರಿನ ಹಿಂದುಗಡೆ ಇರುವ ಅಡುಗೆ ಕೋಣೆಗೆ ಹೋಗುವ ಬಾಗಿಲಿನ ಚಿಲಕವನ್ನು ಮುರಿದು ಕ್ಯಾಶ್ ಕೌಂಟರ್ ನಲ್ಲಿ ಇದ್ದ ರೂ 10000 ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಆರೋಪಿಗಳು ಕೃತ್ಯ ನಡೆಸಿದ ಬಗ್ಗೆ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸಿಸಿ ಕ್ಯಾಮಾರದ ಡಿ ವಿ ಆರ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಇದೇ ರೀತಿ ಶಿರ್ವ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣ ಹಾಗೂ ಇತರ ಕಡೆಗಳಲ್ಲಿ ಬಾರ್ ಅಂಗಡಿಗಳ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳತನ ನಡೆದ ಪ್ರಕರಣಗಳು ವರದಿಯಾಗಿದ್ದವು.

ಅದರಂತೆ ಮಾರ್ಚ್ 15 ರಂದು ರಾತ್ರಿ 2.15 ರ ಸುಮಾರಿಗೆ ಕಟಪಾಡಿ ಜಂಕ್ಷನ್ ಬಳಿ ಕಾಪು ಠಾಣೆಯ ಕ್ರೈಂ ಪಿಎಸ್ ಐ ಯುನೂಸ್ ಗಡ್ಡೇಕರ್ ಹಾಗೂ ಸಿಬಂದಿಯವರು ವಾಹನ ತಪಾಸಣೆ ನಡೆಸುತ್ತಿದ್ದಾಗ ಮಾರುತಿ ಕಾರಿನಲ್ಲಿ ಬಂದಿರುವ ನಾಲ್ವರು ವ್ಯಕ್ತಿಗಳ ಮೇಲೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಅವರ ಬಳಿ ಕಬ್ಬಿಣದ ರಾಡ್ ಇದ್ದು ಪಿಎಸ್ ಐ ಅವರು ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಅವರುಗಳು ಮಣಿಪುರದ ದೆಂದೂರುಕಟ್ಟೆಯಲ್ಲಿರುವ ಮನೋಜ್ ಬಾರ್ ಒಳ ಹೊಕ್ಕು ಹಣ ಕಳವು ಮಾಡಿಕೊಂಡು ಹೋಗಿದ್ದು, ಅಲ್ಲದೆ ಸದ್ರಿ ಬಾರಿನ ಸಿಸಿ ಕ್ಯಾಮಾರದ ಡಿವಿಆರ್, ಯುಪಿಎಸ್ ಬ್ಯಾಟರಿ ಮತ್ತು ಅದರ ಸ್ವಿಚ್ಚನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಪ್ಪೊಪ್ಪಿಕೊಂಡಿ್ದು, ಅಲ್ಲದೆ ಶಿರ್ವದ ಬಂಟಕಲ್, ಕುರ್ಕಾಲುನಲ್ಲಿ ಬಾರ್ ಗಳ ಬಾಗಿಲನ್ನು ಮುರಿದು ಒಳಹೊಕ್ಕು ನಗದು ಹಣ ಕಳ್ಳತನ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ. ಈ ಮೂರು ಅಪರಾಧ ಪ್ರಕರಣಗಳು ಪತ್ತೆಯಾಗಿದ್ದುದರಿಂದ ಆರೋಪಿಗಳನ್ನು ಕೂಲಂಕುಷ ವಿಚಾರಣೆಗೆ ಒಳಪಡಿಸಿದಾಗ ಅವರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಒಟ್ಟು 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ.

ಆರೋಪಿ ರಮೇಶ್ ವಡ್ಡೇರ್ ವಿರುದ್ದ ಗೋವಾದ ಕಾಣಕೋಣ ಠಾಣೆಯಲ್ಲಿ ದೇವಸ್ಥಾನ ಕಳವು ಪ್ರಕರಣ, ಅಂಕೋಲ ಠಾಣಾ ವ್ಯಾಪ್ತಿಯ ದೇವಸ್ಥಾನ ಕಳವು ಪ್ರಕರಣ, ವೇಣೂರು ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಅಂಗಡಿ ಕಳವು, ಮೂಡಬಿದ್ರೆಯಲ್ಲಿ ಬಾರ್ ಮತ್ತು ಮನೆ ಕಳವು ಪ್ರಕರಣಗಳ ಆರೋಪಿಯಾಗಿರುತ್ತಾನೆ. ಅಲ್ಲದೆ ಶಿರ್ವ ಠಾಣಾ ವ್ಯಾಪ್ತಿಯ 2 ಬಾರ್ ಕಳವು, ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣ ಹಾಗೂ ಕಾಪು ಠಾಣಾ ವ್ಯಾಪ್ತಿಯ ಬಾರ್ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳ ಆರೋಪಿಯಾಗಿರುತ್ತಾನೆ.

ಆರೋಪಿ ವಿಜಯ ಹುಲಗಪ್ಪ ವಡ್ಡರ್ ಶಿರ್ವ ಠಾಣಾ ವ್ಯಾಪ್ತಿಯಲ್ಲಿ 2 ಬಾರ್ ಕಳವು ಪ್ರಕರಣ, ಕಾಪು ಠಾಣಾ ವ್ಯಾಪ್ತಿಯ ಬಾರ್ ಕಳವು, ಮೂಡಬಿದ್ರೆ ಠಾಣೆಯಲ್ಲಿ ಬಾರ್ ಕಳ್ಳತನ, 3 ಮನೆ ಕಳ್ಳತನ ಪ್ರಕರಣ, ವೇಣೂರು ಠಾಣಾ ವ್ಯಾಪ್ತಿಯ ಮೊಬೈಲ್ ಅಂಗಡಿ ಕಳವು, ಕಾಪು ಠಾಣಾ ಪ್ರಕರಣ ಸೇರಿದಂತೆ ಒಟ್ಟು 8 ಕಳವು ಪ್ರಕರಣಗಳ ಆರೋಪಿಯಾಗಿರುತ್ತಾನೆ.

ಆರೋಪಿ ನೂರ್ ಮಹಮ್ಮದ್ ಶೇಖ್ ವಿರುದ್ದ ಗೋವಾ ರಾಜ್ಯದಲ್ಲಿ ಒಟ್ಟು 9 ಕಳವು ಪ್ರಕರಣಗಳು ದಾಖಲಾಗಿದ್ದು, ಶಿರ್ವ ಠಾಣಾ ವ್ಯಾಪ್ತಿಯಲ್ಲಿ 2 ಬಾರ್ ಕಳವು ಪ್ರಕರಣ, ಕಾಪು ಠಾಣಾ ವ್ಯಾಪ್ತಿಯಲ್ಲಿ ಬಾರ್ ಕಳವು, ಮೂಡಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಬಾರ್ ಕಳ್ಳತನ ಮತ್ತು 3 ಮನೆ ಕಳ್ಳತನ ಪ್ರಕರಣಗಳು ಸೇರಿಂತೆ ಒಟ್ಟು 16 ಕಳವು ಪ್ರಕರಣಗಳ ಆರೋಪಿಯಾಗಿರುತ್ತಾನೆ.

ಇನ್ನೋರ್ವ ಆರೋಪಿ ರವಿ ಕಾವೂರು ಠಾಣಾ ವ್ಯಾಪ್ತಿಯ ಮೊಬೈಲ್ ಅಂಗಡಿ ಕಳವು ಪ್ರಕರಣ, ವೇಣೂರು ಠಾಣಾ ವ್ಯಾಪ್ತಿಯ ಮೊಬೈಲ್ ಅಂಗಡಿ ಕಳವು ಪ್ರಕರಣ ಹಾಗೂ ಕಾಪು ಠಾಣಾ ವ್ಯಾಪ್ತಿಯ ಬಾರ್ ಕಳವು ಪ್ರಕರಣ ಸೇರಿಂತೆ ಒಟ್ಟು 3 ಪ್ರಕರಣಗಳ ಆರೋಪಿಯಾಗಿರುತ್ತಾನೆ.

ಆರೋಪಿಗಳು ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಕಲ್ಲುಕೋರೆಗಳಲ್ಲಿ ಕೆಲಸ ಮಾಡಿಕೊಂಡು ಮೋಜಿನ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾರ್ಚ್ 27ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತರಿಂದ ಕಳವು ಮಾಡಿದ ಹಣದಿಂದ ಖರಿದೀಸಿದ ರೂ 4,0000 ಮೌಲ್ಯದ ಮಾರುತಿ 800 ಕಾರು , ರೂ 20000 ಮೌಲ್ಯದ ಮೋಟಾರ್ ಸೈಕಲ್, ರೂ 16000 ಮೌಲ್ಯದ 4 ಮೊಬೈಲ್ ಫೋನ್ ಗಳು, ನಗದು ರೂ 1973, ರೂ 5000 ಮೌಲ್ಯದ ಡಿವಿಆರ್, ಬ್ಯಾಟರಿ, ಸ್ವಿಚ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡು ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 82973 ಆಗಿರುತ್ತದೆ.

ಈ ಕಾರ್ಯಾಚರಣೆಯನ್ನು ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಪೋಲಿಸ್ ಉಪಾಧಿಕ್ಷಕ ಭರತ್ ಎಸ್ ರೆಡ್ಡಿ ಇವರ ನಿರ್ದೇಶನದಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಕಾಪು ಪಿ ಎಸ್ ಐ ರಾಜಶೇಖರ್ ಬಿ ಎಸ್, ಕ್ರೈ ಪಿಎಸ್ ಐ ಯುನೂಸ್ ಗಡ್ಡೇಕರ್, ಮತ್ತು ಅಪರಾಧ ಪತ್ತೆದ ತಂಡದ ಸಿಬಂದಿಗಳಾದ ಪ್ರವೀಣ್ ಕುಮಾರ್, ರಾಜೇಶ್, ಸಂದೀಪ್ ರವರು ಕಾರ್ಯಾಚರಣೆ ನಡೆಸಿದ್ದು, ಸಿಬಂದಿಗಳಾದ ರವಿಕುಮಾರ್, ಮಹಾಬಲ, ರಘು, ಶಿವಕುಮಾರ್, ಆನಂದ, ಜಗದೀಶ್ ಹಾಗೂ ಇತರರು ಸಹಕರಿಸಿರುತ್ತಾರೆ.


Spread the love