ಕಾಪು: ಸುಗ್ಗಿ ಮಾರಿಪೂಜೆ ಜಾತ್ರೆ ರದ್ದು

Spread the love

ಕಾಪು: ಸುಗ್ಗಿ ಮಾರಿಪೂಜೆ ಜಾತ್ರೆ ರದ್ದು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-19) ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮದ ಬಗ್ಗೆ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ಜಿ.ಜಗದೀಶ್ ಸಿ.ಆರ್. ಪಿ.ಸಿ 144(3) ಸೆಕ್ಷನ್ ಜಾರಿಗೊಳಿಸಿರುತ್ತಾರೆ.

ಕಾಪು ತಾಲೂಕಿನ ಪಡು ಹಾಗೂ ಉಳಿಯಾರಗೋಳಿ ಗ್ರಾಮದಲ್ಲಿರುವ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಮಾರ್ಚ್ 24 ಹಾಗೂ 25 ರಂದು ಸುಗ್ಗಿ ಮಾರಿಪೂಜೆ ನಡೆಯಲಿದ್ದು, ಸದ್ರಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೇ ಹೊರ ಜಿಲ್ಲೆಯ ಭಕ್ತಾದಿಗಳು ಸೇರಿದಂತೆ ಲಕ್ಷಾಂತರ ಜನ ಬರುವ ಸಂಪ್ರದಾಯ ಇದ್ದು, ಸದ್ರಿ ಜಾತ್ರೆಯಲ್ಲಿ ಭಕ್ತಾದಿಗಳು ಕೋಳಿ, ಕುರಿ, ಆಡು ಇತರ ಹರಕೆ ಸೇವೆ ನೀಡುವ ಸಂಪ್ರದಾಯ ಇರುತ್ತದೆ.

ಈ ವರ್ಷ ಕೊರೊನಾ ವೈರಸ್ (ಕೋವಿಡ್-19 ) ವ್ಯಾಪಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಜಾತ್ರೆ ನಡೆಯುವುದನ್ನು ನಿಷೇಧಿಸಲಾಗಿದೆ. ಸದ್ರಿ ದಿನದಂದು ಸುಗ್ಗಿ ಮಾರಿಪೂಜೆಯನ್ನು ದೇವಳದ ಸಮಿತಿ, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಿ, ಸರಳವಾಗಿ ಆಚರಿಸುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

ಸುಗ್ಗಿ ಮಾರಿಪೂಜೆ ಜಾತ್ರಾ ದಿನದಂದು ಯಾವುದೇ ಬಲಿ ಅರ್ಪಿಸುವ ಹರಕೆ ಸೇವೆಯನ್ನು ಹಾಗೂ ಕೋಳಿ, ಕುರಿ, ಆಡು ಇತರೆ ಮಾರಾಟವನ್ನು ನಿರ್ಬಂಧಿಸಲಾಗಿದೆ. ಜಾತ್ರೆಯ ಎರಡು ದಿನಗಳಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಎಲ್ಲಾ ಮಾಂಸದಂಗಡಿ, ಚಿಕನ್ ಸ್ಟಾಲ್, ಕೋಳಿ ಫಾರ್ಮ್ ಮುಚ್ಚುವಂತೆ ಹಾಗೂ ಕಾಪು ಪುರಸಭೆ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲಿ ಕೋಳಿ, ಆಡು, ಕುರಿ ಸಾಗಾಟ ವಾಹನಗಳು ಪ್ರವೇಶಿಸುವುದನ್ನು ನಿರ್ಬಂಧಿಸಿ, ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.

ದೇವಸ್ಥಾನದ ಆಡಳಿತ ಸಮಿತಿಯವರು ಮುಂದಿನ ದಿನಗಳಲ್ಲಿ ಸುಗ್ಗಿ ಮಾರಿಪೂಜೆ ಆಚರಣೆ ಬಗ್ಗೆ ನಿರ್ಧರಿಸಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕಾಪು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.


Spread the love